ಗ್ರಾ.ಪಂ ಸದಸ್ಯರು, ನೌಕರರ ಬೇಡಿಕೆ ಅಧ್ಯಯನಕ್ಕೆ ತಜ್ಞರ ತಂಡ ರಚಿಸಿ : ದಿನೇಶ್ ಗೂಳಿಗೌಡ ಪತ್ರ
ಬೆಂಗಳೂರು : ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದಾರೆ.
ಸರಕಾರದ ಬೆಂಬಲದಿಂದ ಗ್ರಾಮ ಪಂಚಾಯತಿಗಳು ಗ್ರಾಮ ಸರಕಾರಗಳಂತೆ ಕಾರ್ಯ ನಿರ್ವಹಿಸುವತ್ತ ಹೆಜ್ಜೆ ಇಡುತ್ತಿವೆ. ಜನನ-ಮರಣ ಪ್ರಮಾಣ ಪತ್ರದಿಂದ ಹಿಡಿದು ವಸತಿ ಯೋಜನೆಗಳ ಅನುಷ್ಠಾನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯ ಸ್ವಚ್ಛತೆ, ಸ್ವಾವಲಂಬನೆಗೆ ನೆರವು ನೀಡುವುದರ ಜೊತೆಗೆ 29 ವಿಷಯಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯತಿಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಾ ಗ್ರಾಮೀಣ ಜನರ ಬದುಕಿಗೆ ನೆರವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಈಗ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಳೆದ ನಾಲ್ಕು ದಿನಗಳಿಂದ ತಮ್ಮ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದು, ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಎರಡು ದಿನ, ಈಗ ರಾಜ್ಯದ ಜಿಲ್ಲಾ ಪಂಚಾಯತ್ ಕೇಂದ್ರಗಳಲ್ಲಿ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದಾರೆ. ಅವರ ಬೇಡಿಕೆ ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ದಿನೇಶ್ ಗೂಳಿಗೌಡ ಗಮನ ಸೆಳೆದಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕುಟುಂಬದ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಸಾಧ್ಯವಾದಷ್ಟು ಶೀಘ್ರವಾಗಿ ಆಹ್ವಾನಿಸಿ ಸಭೆ ನಡೆಸಿ ಅವರ ಬೇಡಿಕೆಗಳನ್ನು ಪರೀಶೀಲನೆ ನಡೆಸಬೇಕು ಎಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
.