ಅಶೋಕ್‍ರ ಹೊಟ್ಟೆಕಿಚ್ಚಿನ ಖಾಯಿಲೆಗೆ ಯಾವ ಔಷಧ ಕೊಡಲು ಸಾಧ್ಯ? : ದಿನೇಶ್ ಗುಂಡೂರಾವ್
ಬೆಂಗಳೂರು: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ’, ಸರಕಾರ ಏನೇ ಜನಪರ ಯೋಜನೆ ತಂದರೂ ಅದರಲ್ಲಿ ಹುಳುಕು ಹುಡುಕುವ ರೋಗ ಹೊಂದಿರುವ ವಿಪಕ್ಷ ನಾಯಕ ಆರ್. ಅಶೋಕ್, ‘ಗೃಹ ಆರೋಗ್ಯ' ಯೋಜನೆ ಪುಕ್ಕಟೆ ಪ್ರಚಾರದ ಯೋಜನೆ ಎಂದಿದ್ದಾರೆ. ಅಶೋಕ್‍ರ ಈ ಹೊಟ್ಟೆಕಿಚ್ಚಿನ ಖಾಯಿಲೆಗೆ ಯಾವ ಔಷಧ ಕೊಡಲು ಸಾಧ್ಯ? ಆರೋಗ್ಯ ಇಲಾಖೆ ಬಳಿಯೂ ಹೊಟ್ಟೆಕಿಚ್ಚಿನ ಖಾಯಿಲೆಗೆ ಔಷಧವಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ದಿನೇಶ್ ಗುಂಡೂರಾವ್, ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರಕಾರ ‘ಗೃಹ ಆರೋಗ್ಯ' ಎಂಬ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ವೈದ್ಯಕೀಯ ಸಿಬ್ಬಂದಿಗಳೇ ಗ್ರಾಮೀಣ ಪ್ರದೇಶದ ಜನರ ಮನೆಗಳಿಗೆ ಹೋಗಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಸಾಂಕ್ರಾಮಿಕವಲ್ಲದ ರೋಗ ಪತ್ತೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಈ ಯೋಜನೆ ದೇಶದಲ್ಲೇ ಮೊದಲು. ಅಶೋಕ್‍ರವರೇ, ಗುಣಕ್ಕೆ ಮತ್ಸರವಿರಬಾರದು ಎಂಬುದು ಹಿರಿಯರ ಮಾತು ಎಂದು ಹೇಳಿದ್ದಾರೆ.
ಜ್ಞಾನ ಯಾವ ಮೂಲದಿಂದ ಬಂದರೂ ಸ್ವೀಕರಿಸು ಎಂಬ ಋಗ್ವೇದದ ಪಾಠದಂತೆ ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ಸ್ವೀಕರಿಸಬೇಕು. ಗ್ರಾಮೀಣ ಭಾಗದ ಜನರಿಗೆ ಸಂಜೀವಿನಿಯಾಗಿರುವ ‘ಗೃಹ ಆರೋಗ್ಯ ಯೋಜನೆ’ಯನ್ನೂ ಕೇವಲ ರಾಜಕೀಯ ಕಾರಣಕ್ಕಾಗಿ ಟೀಕಿಸುವ ನಿಮಗೆ ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆ ಕಾಳಜಿ ಇದೆಯೇ? ಹೋಗಲಿ ನಿಮ್ಮ ಸರಕಾರವಿದ್ದಾಗ ಜನರ ಆರೋಗ್ಯಕ್ಕೆ ಅನುಕೂಲವಾಗುವಂತಹ ಇಂತಹ ಯಾವುದಾದರೂ ಯೋಜನೆ ಜಾರಿಗೆ ತಂದ ಉದಾಹರಣೆ ಇದೆಯೆ?’ ಎಂದು ಪ್ರಶ್ನಿಸಿದ್ದಾರೆ.
ಪುಕ್ಕಟೆ ಪ್ರಚಾರ: ‘ಮನೆ ಮನೆಗೆ ಆರೋಗ್ಯ ದೂರದ ಮಾತು ಸ್ವಾಮಿ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೌಚಾಲಯ ಸರಿಮಾಡಿ. ಕಾಕಾ ಪಟೀಲನಿಗೂ ಫ್ರೀ, ನಿಂಗೂ ಫ್ರೀ ಎಂದು ಕನ್ನಡಿಗರ ಕಿವಿ ಮೇಲೆ ಹೂ ಇಟ್ಟು ಅಧಿಕಾರಕ್ಕೀರಿದ್ದಾಯ್ತು. ಈಗ ‘ಮನೆ ಮನೆಗೆ ಆರೋಗ್ಯ' ಎಂದು ಪುಕ್ಕಟೆ ಪ್ರಚಾರಕ್ಕೆ ಮತ್ತೊಂದು ದಾರಿ ಹುಡುಕಿಕೊಂಡಿರುವ ಸರಕಾರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೌಚಾಲಯ ಬಂದ್ ಮಾಡಿ ಪುರುಷರು ಮಹಿಳೆಯರ ವಾರ್ಡ್‍ನ ಶೌಚಾಲಯಕ್ಕೆ ಹೋಗುವ ಶೋಚನೀಯ ಸ್ಥಿತಿ ತಂದಿಟ್ಟಿದೆ’
-ಆರ್.ಅಶೋಕ್ ಪ್ರತಿಪಕ್ಷ ನಾಯಕ