ಕೇಂದ್ರ ಸರಕಾರ ಕೇವಲ 3,454 ಕೋಟಿ ರೂ. ಬರ ಪರಿಹಾರ ನೀಡಿ ಕಣ್ಣೊರೆಸುವ ತಂತ್ರ ಮಾಡಿದೆ : ದಿನೇಶ್ ಗುಂಡೂರಾವ್‌

Update: 2024-04-27 14:53 GMT

ಬೆಂಗಳೂರು : ಬರದ ವೈಜ್ಞಾನಿಕ ಸಮೀಕ್ಷೆ ಮಾಡಿ ಎನ್‍ಡಿಆರ್ ಎಫ್ ಮಾರ್ಗಸೂಚಿಯಂತೆ ರಾಜ್ಯ ಸರಕಾರದಿಂದ 18,172 ಕೋಟಿ ರೂ.ಕೇಂದ್ರದ ಪರಿಹಾರ ಕೇಳಿದ್ದೆವು. ಆದರೆ ಕೇಂದ್ರ ಸರಕಾರ ಕೇವಲ 3,454 ಕೋಟಿ ರೂ.ಬರ ಪರಿಹಾರ ನೀಡಿ ಕಣ್ಣೊರೆಸುವ ತಂತ್ರ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, "ಬರದಿಂದ ಈ ಬಾರಿ 48 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಬೆಳೆ ನಷ್ಟವಾಗಿದೆ. ಇದರ ಒಟ್ಟಾರೆ ಬೆಳೆ ನಷ್ಟದ 35 ಸಾವಿರ ಕೋಟಿ ರೂ. ಆಗಿದೆ. ಕೇಂದ್ರ ಸರಕಾರ ಪರಿಹಾರ ನೀಡಲು 9 ತಿಂಗಳಿಂದ ಸತಾಯಿಸಿ, ಈಗ ಕಾಟಾಚಾರಕ್ಕೆ 3,454 ಕೋಟಿ ರೂ. ಇಡುಗಡೆ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರಕಾರ ಯಾವ ಮಾನದಂಡದ ಆಧಾರದಲ್ಲಿ ಬರ ಪರಿಹಾರದ ಮೊತ್ತ ನಿರ್ಧರಿಸಿದೆ.? ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಕೊಟ್ಟಂತೆ ಬರ ಪರಿಹಾರ ನೀಡಿದರೆ ರಾಜ್ಯದ ರೈತರ ಕಷ್ಟ ನೀಗುವುದೆ.? ಇದೇನು ಭಿಕ್ಷೆಯೇ ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರ ಸರಕಾರ ವಾರದೊಳಗೆ ಕರ್ನಾಟಕಕ್ಕೆ ಬರ ಪರಿಹಾರ ನೀಡುವುದಾಗಿ ವಾಗ್ಧಾನ ನೀಡಿತ್ತು. ಆದರೆ ಎಷ್ಟು ಹಣ ನೀಡುವುದಾಗಿ ಮೌಕಿಕವಾಗಿ ಹಾಗೂ ಲಿಖಿತವಾಗಿ ಹೇಳಿರಲಿಲ್ಲ. ಈಗ ಕೇವಲ 3,454 ಕೋಟಿ ರೂ. ಪರಿಹಾರ ಕೊಟ್ಟಿದೆ. ಇದು ನ್ಯಾಯಾಲಯದ ಆದೇಶವನ್ನೂ ಪಾಲಿಸಿದ್ದೇವೆ. ಹಾಗೂ ಬರ ಪರಿಹಾರವನ್ನೂ ಕೊಟ್ಟಿದ್ದೇವೆ ಎಂದು ಬಿಂಬಿಸುವ ಕೇಂದ್ರ ಸರಕಾರದ ತಂತ್ರವಷ್ಟೇ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News