ಇತ್ತೀಚಿಗೆ ಸುಳ್ಳು ಸುದ್ದಿ ಸೃಷ್ಟಿ ಹೆಚ್ಚಾಗುತ್ತಿದೆ : ದಿನೇಶ್ ಗುಂಡೂರಾವ್

Update: 2024-09-03 16:07 GMT

ಬೆಂಗಳೂರು : ‘ಸುಳ್ಳು ಸುದ್ದಿ’ ಎನ್ನುವ ಬದಲು ತಪ್ಪು ಮಾಹಿತಿ ಎನ್ನುವುದು ಉತ್ತಮ. ಇವು ಎರಡಕ್ಕೆ ತುಂಬಾ ವ್ಯತ್ಯಾಸವಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಮಾದ್ಯಮ ಅಕಾಡಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸುಳ್ಳುಸುದ್ದಿ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸುಳ್ಳು ಸುದ್ದಿಗಳು ಹೆಚ್ಚು ಇರುತ್ತಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣ ಪ್ರಬಲವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಪ್ರಚಾರ ಮತ್ತಿತರರ ಕಾರಣಗಳಿಂದ ‘ಫ್ರೊಪಗಾಂಡ’ ಮಾಡಲಾಗುತ್ತಿದೆ ಎಂದು ಹೇಳಿದರು.

ಜನರ ಮೇಲೆ ತಮ್ಮ ಪ್ರಭಾವ ಬೀರಲು ಸಾಮಾಜಿಕ ಜಾಲಾತಾಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಯಾವ ಸುದ್ದಿ ನಿಜ ಯಾವುದು ಸುಳ್ಳು ಎಂದು ತಿಳಿಯುವುದೇ ಕಷ್ಟವಾಗಿದೆ. ಇದರಿಂದ ಸಮಾಜದ ಮೇಲೆ ಹಲವು ರೀತಿಯ ಪರಿಣಾಮಗಳು ಆಗುತ್ತಿವೆ. ಹಿಂದೆ ‘ಪೋಸ್ಟ್ ಕಾರ್ಡ್’ ಎಂಬ ವೆಬ್‍ಸೈಟ್ ಇತ್ತು. ಅದರಲ್ಲಿ ಬರೀ ‘ಸುಳ್ಳು ಸುದ್ದಿ’ಗಳನ್ನೆ ಪ್ರಸಾರ ಮಾಡಲಾಗುತ್ತಿತ್ತು. ಕೆಲವು ಮಾದ್ಯಮಗಳು ಇಂದು ಬದಲಾಗಿವೆ.

ಯಾವುದೇ ಒಂದು ಸುದ್ದಿ ಇರಲಿ ಅದು ಸತ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮುಂದಿನ ಪೀಳಿಗೆ ಪತ್ರಕರ್ತರು ಹೊರತರುವ ಕೆಲಸ ಮಾಡಬೇಕು. ದೇಶಕ್ಕೆ ಉತ್ತಮ ಮತ್ತು ದಿಟ್ಟ ಪತ್ರಿಕೋದ್ಯಮದ ಅಗತ್ಯ ಇದೆ ಎಂದು ಹೇಳಿದರು.

ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಸುಳ್ಳು ಸುದ್ದಿ ಪದ ಪ್ರಯೋಗವೇ ಸರಿಯಿಲ್ಲ. ಸತ್ಯಾಂಶ ಇದ್ದಾಗ ಮಾತ್ರ ಸುದ್ದಿಯಾಗುತ್ತದೆ. ಇಂದು ಸುಳ್ಳುಗಳನ್ನು ದಾಖಲೆ ಮಾಡುವುದು ಹೆಚ್ಚಾಗುತ್ತಿದೆ. ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದ ಬಳಕೆ ಸರಿಯಾಗಿ ಮಾಡಬೇಕು. ಸಾಮಾಜಿಕ ಜಾಲಾತಾಣದಲ್ಲಿ ಸುಳ್ಳು ಸುದ್ದಿ ಹೆಚ್ಚಾಗುತ್ತಿವೆ. ಕೆಲವರು ಬೇಕಂತಲೇ ಸುಳ್ಳು ಸುದ್ದಿ ಹರಡುವುದರಿಂದ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಯಾವ ಮಾಧ್ಯಮ ಜನತೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆಯೋ ಅದು ಹೆಚ್ಚು ದಿನ ಉಳಿಯುವುದಿಲ್ಲ. ಭಾರತ ಭಾವನಾತ್ಮಕ ಹಾಗೂ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಸುಳ್ಳು ಸುದ್ದಿಯಿಂದ ದೇಶದಲ್ಲಿ ಕೋಮು ಗಲಭೆಯಾಗುತ್ತವೆ. ಇಂದು ಮುಖ್ಯವಾಹಿನಿಯ ಮಾದ್ಯಮಗಳು ಸುದ್ದಿಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿಲ್ಲ. ಸಾಮಾಜಿಕ ಮಾದ್ಯಮಗಳಿಂದ ಅನೇಕ ಉಪಯೋಗ ಆಗುತ್ತವೆ. ಮತ್ತು ದುರುಪಯೋಗವೂ ಹೆಚ್ಚಾಗಿವೆ. ದೇಶದಲ್ಲಿ ಆರೋಗ್ಯಕಾರಿ ಮಾದ್ಯಮ ನಿರ್ಮಾಣ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾದ್ಯಮ ಅಕಾಡಮಿಯ ಸದಸ್ಯರಾದ ಅಹೋಬಲಪತಿ, ಕೆ.ನಿಂಗಜ್ಜ, ಕೆ.ವೆಂಕಟೇಶ್, ಕಾರ್ಯದರ್ಶಿ ಸಿ.ರೂಪಾ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಳು ಸುದ್ದಿ ಸಮಾಜದ ಮೇಲೆ ಅನೇಕ ಪ್ರಭಾವವನ್ನು ಬೀರುತ್ತದೆ. ಇದು ಸಾರ್ವಜನಿಕ ಅಬಿಪ್ರಾಯವನ್ನು ವಿರೂಪಗೊಳಿಸುವುದರ ಜತೆಗೆ, ಸಾಮಾಜಿಕ ವಿಭಜನೆಯನ್ನು ಗಾಢವಾಗಿಸುವ ತಪ್ಪು ಮಾಹಿತಿ ಶಾಸ್ವತವಾಗಿಸುತ್ತದೆ. ದುರ್ಬಲ ಸಮುದಾಯಯಗಳನ್ನು ಅಂಚಿಗೆ ತಳ್ಳುತ್ತದೆ. ಸಮಾಜದಲ್ಲಿನ ನ್ಯಾಯ ಮತ್ತು ಸಮಾನತೆಯನ್ನು ಪ್ರಯತ್ನವನ್ನು ದುರ್ಬಲಗೊಳಿಸುತ್ತದೆ.

ಆಯೇಷಾ ಖಾನಂ, ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News