‘ಆತ್ಮಹತ್ಯೆ’ ನಿಖರ ಮಾಹಿತಿ ಸಂಗ್ರಹಿಸಬೇಕು : ದಿನೇಶ್ ಗುಂಡೂರಾವ್

Update: 2024-09-10 16:47 GMT

ಬೆಂಗಳೂರು : ಆತ್ಮಹತ್ಯೆ ಪ್ರಕರಣಗಳು ಯಾವ ವಯಸ್ಸು, ಲಿಂಗ, ಉದ್ಯೋಗ ಮತ್ತು ಪ್ರದೇಶದಲ್ಲಿ ಹೆಚ್ಚು ಸಂಭವಿಸುತ್ತಿವೆ ಎನ್ನುವ ನಿಖರ ಮಾಹಿತಿ ಸಂಗ್ರಹಿಸಬೇಕು. ಆ ಆಧಾರದ ಮೇಲೆ ಯೋಜನೆ ರೂಪಿಸಿದಾಗ ಪರಿಣಾಮಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಿಮ್ಹಾನ್ಸ್ ಕನ್ವೆಷನ್ ಹಾಲ್‍ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯ ಸಹಭಾಗಿತ್ವದಲ್ಲಿ ನಿಮ್ಹಾನ್‍ನಲ್ಲಿ ಆರಂಭವಾದ ‘ಎನ್-ಸ್ರ್ಪೈಟ್’ ಮಾನಸಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆತ್ಮಹತ್ಯೆ ಕುರಿತಾದ ತಪ್ಪುಕಲ್ಪನೆ ಹೋಗಲಾಡಿಸಿ, ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಆತ್ಮಹತ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿಯೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಯುವಜನತೆ ಆತ್ಮಹತ್ಯೆಗೆ ಬಲಿಯಾಗುತ್ತಿರುವುದು ಕಳವಳಕಾರಿ. ಮಾನಸಿಕ ಆರೋಗ್ಯದೊಂದಿಗೆ ಆತ್ಮಹತ್ಯೆಯನ್ನು ಅಪರಾಧ ಎಂದು ಪರಿಗಣಿಸಬಾರದು ಹಾಗೂ ಶಿಕ್ಷೆ ಬದಲಾಗಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

ಯುವಜನತೆಯಲ್ಲಿ ಕಾಡುವ ಒಂಟಿತನ, ಸಾಮಾಜಿಕ ಪ್ರತ್ಯೇಕತೆಯಿಂದ, ಅಸಮಾನತೆಯಿಂದಾಗಿ ಆತ್ಮಹತ್ಯೆ ನಿತ್ಯವೂ ಹೆಚ್ಚಾಗುತ್ತಿದೆ. ಆತ್ಮಹತ್ಯೆ ಜಾಗತಿಕ ಮಟ್ಟದಲ್ಲಿ ಗಂಭೀರ ವಿಷಯವಾಗಿದ್ದು, ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತಗೊಳಿಸಬಾರದು. ಇದನ್ನು ಸಾಮಾಜಿಕ ಸಮಸ್ಯೆ ಎಂದು ಪರಿಗಣಿಸಿ ಸಮಾಜದ ಪ್ರತಿಯೊಂದು ಕ್ಷೇತ್ರದವರು ತಡೆಗಟ್ಟುವಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News