ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಂಗೆ ಸರಕಾರ ಅಗತ್ಯ ಸಹಕಾರ ನೀಡಲಿದೆ : ದಿನೇಶ್ ಗುಂಡೂರಾವ್

Update: 2024-10-19 16:59 GMT

ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ಇಲಾಖೆ, ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಬೆಂಗಳೂರಿನ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ಹೆಲ್ತ್ ಟೂರಿಸಂಗೆ ಉತ್ತೇಜನ ನೀಡುವ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಶನಿವಾರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಸಚಿವರು, ಹೆಲ್ತ್ ಟೂರಿಸಂ ಬೆಳೆಸಲು ಸರಕಾರದಿಂದ ಆಗಬೇಕಾಗಿರುವ ಕಾರ್ಯಗಳ ಕುರಿತು ಖಾಸಗಿ ವಲಯದ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಗುಂಡೂರಾವ್‌ ಅವರು, ʼಹೊರ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿಗೆ ಜನರು ಬರುತ್ತಾರೆ. ಇಲ್ಲಿಗೆ ಬರುವ ಜನರಿಗೆ ಇಲ್ಲಿಯ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು, ಹಾಗೂ ಚಿಕಿತ್ಸೆ ಬಗ್ಗೆ ಒಂದು ಭರವಸೆ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆ ಕುರಿತು ಸರಕಾರ ಸರ್ಟಿಫೈ ಮಾಡುವ ಕ್ರಮಗಳು ಆಗಬೇಕಿದೆ. ಸರಕಾರದಿಂದ ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಾಗ ಜನರಿಗೆ ವಿಶ್ವಾಸ ಮೂಡಲಿದೆ. ಇದರಿಂದ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಿಂ ಬೆಳೆಯುವುದರ ಜೊತೆಗೆ, ಐಟಿ ಸಿಟಿ ಬೆಂಗಳೂರು, ಹೆಲ್ತ್ ಸಿಟಿಯಾಗಿಯೂ ಹೆಸರುಗಳಿಸಬಹುದುʼ ಎಂದರು.

ಕೆಲವು ಗುಣಮಟ್ಟದ ಚಿಕಿತ್ಸೆಗಳನ್ನು ಪಡೆಯಲು ಮಾತ್ರ ಜನರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಉತ್ತಮ ಆಸ್ಪತ್ರೆಗಳಿವೆ. ಇಂದು ವಿದೇಶಗಳಲ್ಲಿ ತಜ್ಞ ವೈದ್ಯರ ಸಮಯಕ್ಕಾಗಿ ತಿಂಗಳು ಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಂ ಮೂಲಕ ವಿದೇಶಿಗರನ್ನು ಹೆಚ್ಚು ಆಕರ್ಷಿಸಬಹುದು. ಅಲ್ಲದೇ ಆರೋಗ್ಯ ಸೇವೆಗಳಿಗೆ ಬೆಂಗಳೂರಿಗೆ ಬರುವ ಜನರು ರಾಜ್ಯದ ಇತರ ಪ್ರವಾಸ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಮಣಿಪಾಲ್ ಆಸ್ಪತ್ರೆ, ನಾರಾಯಣ ಹೃದಯಾಲಯ, ಅಪೋಲೋ ಹೆಲ್ತ್ ಕೇರ್ ಸೇರಿದಂತೆ 50 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸರಕಾರದ ವತಿಯಿಂದ ಅಧಿಕೃತ ಪೊರ್ಟಲ್ ಒಂದನ್ನು ರಚಿಸಿ, ಆ ಮೂಲಕ ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆಗಳ ಕುರಿತು ಸರಕಾರವೇ ಕ್ರೆಡಿಟ್ ಪಾಯಿಂಟ್ಸ್ ಗಳನ್ನು ನೀಡಬಹುದು ಎಂದು ಸಭೆಯಲ್ಲಿ ಹಲವು ಖಾಸಗಿ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News