ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ : ಡಿ.ಕೆ.ಶಿವಕುಮಾರ್

Update: 2024-09-02 16:57 GMT

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಈ ಕುರ್ಚಿ ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರಕಾರ ನಡೆಯುತ್ತಿದೆ ಎಂದು ಉಪಮುಖಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎನ್ನುವ ಆರ್.ವಿ.ದೇಶಪಾಂಡೆಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸುತ್ತಾ ಹಿರಿಯರಾದ ದೇಶಪಾಂಡೆ ಅವರು ಆಸೆ ಪಡುವುದು ತಪ್ಪಲ್ಲ. ಆದರೆ, ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನೀಡೋಣ ಎಂದರು.

ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ತೀರ್ಪು ಬಂದರೆ ಮುಂದಿನ ನಡೆ ಏನು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ವ್ಯತಿರಿಕ್ತವಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಕೆಲಸ ಮಾಡುತ್ತಾರೆ’ ಎಂದರು.

ಕೋವಿಡ್ ವರದಿ ಬಗ್ಗೆ ಆಕ್ಷೇಪಿಸಿ ಕಾಂಗ್ರೆಸ್ ಅವರು ಸತ್ಯಹರಿಶ್ಚಂದ್ರರೇ ಎನ್ನುವ ಹೇಳಿಕೆ ನೀಡಿದ ಸಂಸದ ಡಾ.ಕೆ.ಸುಧಾಕರ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‍ನಲ್ಲಿದ್ದು ಈಗ ಬಿಜೆಪಿಗೆ ಹೋಗಿರುವ ಸಂಸದ ಸುಧಾಕರ್ ಅವರು ತಮ್ಮ ಹೇಳಿಕೆಯ ಬಗ್ಗೆ ಮೊದಲು ಪ್ರಮಾಣ ಪತ್ರ ನೀಡಲಿ. ಅವರ ರಕ್ತ, ಆಚಾರ, ವಿಚಾರ ಎಲ್ಲವೂ ಕಾಂಗ್ರೆಸ್ ಇತ್ತು. ಈಗ ನಾಲ್ಕೈದು ವರ್ಷದಿಂದ ಬದಲಾಗಿದೆ ಎಂದರು.

ನಾನು ಕೋವಿಡ್ ಹಗರಣದ ವರದಿಯನ್ನು ಓದಿಲ್ಲ. ಕೇವಲ ಮಾಧ್ಯಮಗಳ ವರದಿಯನ್ನು ಮಾತ್ರ ಓದಿದ್ದೇನೆ. ವರದಿ ಪರಿಶೀಲನೆ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News