ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು ಐತಿಹಾಸಿಕ ಬಜೆಟ್ : ಡಿ.ಕೆ.ಶಿವಕುಮಾರ್

ಕಲಬುರಗಿ : ಸಿಎಂ ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿ ರೂ.ಗೂ ಮೀರಿ ಮಂಡಿಸಿದ ಬಜೆಟ್ ಐತಿಹಾಸಿಕವಾಗಿದ್ದು, ಇದರಲ್ಲಿ ಎಲ್ಲಾ ವರ್ಗಕ್ಕೂ ಅನುದಾನವನ್ನು ಸಮತೋಲನವಾಗಿ ಹಂಚಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಕುಟುಂಬದ ಕಣ್ಣು ಎಂಬ ಮಾತಿನಂತೆ ಹೆಣ್ಣಿಗೆ ಅತಿ ಹೆಚ್ಚು ಶಕ್ತಿ ಕೊಡುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಆಶಾ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಗೌರವಧನ ಹೆಚ್ಚಿಸಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೊಡುವುದಾಗಿ ಹೇಳಿದ್ದೇವೆ, ಅದರ ಅನುಗುಣವಾಗಿ ಕೊಟ್ಟಿದ್ದೇವೆ. ಇಂದು 'ಕಲ್ಯಾಣ ಪಥ' ರಸ್ತೆ ನಿರ್ಮಾಣಕ್ಕೆ ಶಂಖು ಸ್ಥಾಪನೆಯನ್ನು ಜೇವರ್ಗಿಯಲ್ಲಿ ಮಾಡುತ್ತಿದ್ದೇವೆ. 22 ಸಾವಿರ ಕೋಟಿ ರೂ. ನೀರಾವರಿಗೆ ಅನುದಾನ ಕೊಟ್ಟಿದ್ದು, ತುಂಗಭದ್ರಾ 25 ರಿಂದ 30 ಟಿಎಂಸಿ ನೀರು ವ್ಯತ್ಯಯವಾಗುತ್ತಿದೆ. ಅದರ ಬಳಕೆಯ ಕುರಿತಾಗಿ ತೆಲಂಗಾಣ, ಆಂಧ್ರಪ್ರದೇಶ ಸಿಎಂ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ತೊಗರಿ ಬೆಳೆ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ತೊಗರಿ ಬೆಳೆ ಹಾನಿಯಾಗಿರುವ ಕುರಿತು ಅರ್ಜಿ ಕೊಟ್ಟಿದ್ದಾರೆ. ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ನೀಡುವ ಕಾರ್ಯ ಮಾಡಲಿದ್ದೇವೆ. ಜಿಲ್ಲೆಯ ಜಿಲ್ಲಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ರೈತರನ್ನು ನಮ್ಮ ಸರಕಾರ ವಿಶೇಷ ಕಾಳಜಿಯಿಂದ ನೋಡುತ್ತದೆ ಎಂದರು.