ಸ್ಪೀಕರ್ ಯು.ಟಿ. ಖಾದರ್ ನೀಡಿದ "ಗಂಡಬೇರುಂಡ" ಪಿನ್ ಧರಿಸಿ ಅಮೇರಿಕಾಕ್ಕೆ ತೆರಳಿದ ಡಿಸಿಎಂ ಡಿಕೆಶಿ
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿ ಸಮೇತ ಅಮೇರಿಕಾಕ್ಕೆ ಖಾಸಗಿ ಪ್ರವಾಸ ಕೈಗೊಂಡಿದ್ದಾರೆ. ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಎಲ್ಲಾ ಶಾಸಕರಿಗೆ ಮೇಲ್ವಸ್ತ್ರದ ಮುಂಭಾಗ ಅಳವಡಿಸಲು ಸರಕಾರದ ಲಾಂಛನವಾದ "ಗಂಡಬೇರುಂಡ" ಪಿನ್ ನೀಡಿದ್ದರು. ಡಿಸಿಎಂ ಡಿಕೆಶಿ ಅವರು ಅಮೇರಿಕಾ ಭೇಟಿ ಸಂದರ್ಭ ಕೂಡಾ ಇದೇ ಪಿನ್ ಧರಿಸಿದ್ದರು. ಅಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾದಾಗ ಡಿಕೆಶಿ ಕೋಟಿನಲ್ಲಿದ್ದ "ಗಂಡಬೇರುಂಡ" ಪಿನ್ ನ್ನು ಕುತೂಹಲದಿಂದ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಒಡೆಯರ ರಾಜ್ಯ ನಿರ್ಮಾಣದೊಂದಿಗೆ "ಗಂಡಬೇರುಂಡ" ಲಾಂಛನವು ಜೊತೆಯಾಗಿ ಬಂದು, ಇಂದಿನ ಕರ್ನಾಟಕ ಸರ್ಕಾರದ ಲಾಂಛನವಾಗಿ ಕೂಡಾ ಮನ್ನಣೆ ಗಳಿಸಿದೆ. ಈ ಲಾಂಛನ ಈ ಬಾರಿಯ ವಿಧಾನಸಭೆಯಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಲು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಕಾರಣಕರ್ತರು. ವಿಧಾನಸೌಧದಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವ ಖಾದರ್, ವಿಧಾನಸೌಧದ ತುಂಬಾ ಗಂಡಬೇರುಂಡ ಆಕೃತಿಯ ಗಡಿಯಾರಗಳನ್ನು ಅಳವಡಿಸಿದ್ದಾರೆ. ರಾಜ್ಯದ ಎಲ್ಲಾ ಶಾಸಕರಿಗೆ ಸದನದಲ್ಲಿ ಧರಿಸಲು "ಗಂಡಬೇರುಂಡ" ಪಿನ್ ನೀಡಿದ್ದಾರೆ.
ಬಹುತೇಕ ಶಾಸಕರು ಈ ಪಿನ್ ನ್ನು ನಮ್ಮ ರಾಜ್ಯದ ಹೆಮ್ಮೆ ಎಂಬಂತೆ ಸಾರ್ವಜನಿಕ ರಂಗದಲ್ಲೂ ಅಳವಡಿಸಿ ಗೌರವ ನೀಡುತ್ತಿದ್ದಾರೆ. ಡಿಸಿಎಂ ಡಿಕೆಶಿ ಅವರು ಅಮೇರಿಕಾದಲ್ಲೂ ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ರಾಹುಲ್ ಗಾಂಧಿ ಕೂಡಾ ಈ ನಡೆಯನ್ನು ಸ್ವಾಗತಿಸಿದ್ದಾರೆ.