‘ವೈದ್ಯರು ಪ್ರತಿಭಟನೆ’: ರೋಗಿಗಳ ಪರದಾಟ

Update: 2024-08-17 17:14 GMT

ಬೆಂಗಳೂರು : ಕಲ್ಕತ್ತಾದ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯೆ ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು ನೀಡಿದ್ದ ಕರೆಗೆ ಶನಿವಾರದಂದು ರಾಜ್ಯಾದ್ಯಂತ ವೈದ್ಯರು ಪ್ರತಿಭಟನೆಯನ್ನು ನಡೆಸಿದ್ದು, ರೋಗಿಗಳು ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ರಾಜ್ಯದ ಬಹುತೇಕ ನಗರಗಳಲ್ಲಿ ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಕೆಲಕಡೆಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೊಡಗಿದ್ದರು. ಹೀಗಾಗಿ ರಾಜ್ಯದ ಸರಕಾರಿ ಸೇರಿ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಒಪಿಡಿ, ಡಯಾಲಿಸಿಸ್, ಕ್ಲಿನಿಕ್ ಸೇವೆ, ಮಕ್ಕಳ ಒಪಿಡಿ, ಡೆಂಟಲ್ ಸೇವೆಗಳು ವ್ಯತ್ಯಯವಾಗಿದ್ದವು.

ವೈದ್ಯರ ಪ್ರತಿಭಟನೆ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಿಗೆ ಆಗಮಿಸಿದ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗದೆ ಪರದಾಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸಾರ್ವಜನಿಕ ಆಸ್ಪತ್ರೆ ಬಂದ್ ಆಗಿದ್ದರಿಂದ ಆಟೋದಲ್ಲಿ ಬಂದ ವೃದ್ಧ ದಂಪತಿ ಸೂಕ್ತ ಚಿಕಿತ್ಸೆ ಸಿಗದೆ ಆಸ್ಪತ್ರೆ ಆವರಣದಲ್ಲಿ ಕೆಲವು ಗಂಟೆಗಳ ಕಾಲ ವೈದರಿಗಾಗಿ ಕಾಯುತ್ತಿದ್ದರು.

ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಗೆ ಆಗಮಿಸಿದ ರೋಗಿಗಳು ತುರ್ತು ಚಿಕಿತ್ಸೆಗಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಸರದಿ ಸಾಲಿನಲ್ಲಿ ನಿಂತು ಕಾಯುವಂತಾಗಿತ್ತು. ಒಳರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡಲಾಗಿದ್ದು, ಹೊರರೋಗಿಗಳ ಚಿಕಿತ್ಸೆ ಬಂದ್ ಮಾಡಿದ್ದರಿಂದ ರೋಗಿಗಳು ಪರದಾಡಿದರು. ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೇ ಗರ್ಭಿಣಿ ಪರದಾಡಿದಂತಹ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News