ಕ್ರಾಂತಿ, ಪ್ರತಿಕ್ರಾಂತಿಯಲ್ಲಿ ಮಹಿಳೆಯನ್ನು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ : ಡಾ.ಧಮ್ಮ ಸಂಘಿನಿ ರಮಾಘೋರಕ್

Update: 2024-10-27 15:33 GMT

PC: Ivan D'Silva

ಬೆಂಗಳೂರು : ಭಾರತದಲ್ಲಿನ ಕೆಳವರ್ಗಗಳ ಎಲ್ಲ ವರ್ಗಗಳನ್ನು ಒಟ್ಟುಗೂಡಿಸಿ ಕ್ರಾಂತಿ ಮತ್ತು ಪ್ರತಿಕ್ರಾಂತಿ ಮಾಡಲು ಮಹಿಳೆಯನ್ನೂ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ ಎಂದು ಫುಲೆ-ಅಂಬೇಡ್ಕರ್ ವಾದಿ ಕಾರ್ಯಕರ್ತೆ ಡಾ.ಧಮ್ಮ ಸಂಘಿನಿ ರಮಾಘೋರಕ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕೌದಿ ಪ್ರಕಾಶನವು ಆಯೋಜಿಸಿದ್ದ ಡಾ.ದು.ಸರಸ್ವತಿ ಅನುವಾದಿಸಿರುವ ‘ಜಾತಿ ಮತ್ತು ಲಿಂಗತ್ವ-ದಲಿತ ಮಹಿಳೆಯರ ಸತ್ಯಕತೆಗಳ ನಿರೂಪಣೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಕನ್ನಡಕ್ಕೆ ಅನುವಾದಿತಗೊಂಡ ಜಾತಿ ಮತ್ತು ಲಿಂಗತ್ವ ಕೃತಿಯು ಮೊದಲಿಗೆ ಮರಾಠಿಯಿಂದ ಇಂಗ್ಲಿಷ್ಗೆ ಅನುವಾದಗೊಂಡಿತ್ತು. ಹೀಗೆ ಕೃತಿಯು ಭಾಷೆಯಿಂದ ಭಾಷೆಗೆ ಅನುವಾದಗೊಳ್ಳುವಾಗ ಅನೇಕ ಅಡತಡೆಗಳು ಉಂಟಾಗುತ್ತದೆ. ಈ ಅಡೆತಡೆಗಳನ್ನು ಮೀರಿ ಪುಸ್ತಕವು ಕನ್ನಡಕ್ಕೆ ಭಾಷಾಂತರವಾಗಿದೆ ಎಂದು ವೇದಿಕೆಯಲ್ಲಿರುವವರು ಹೇಳೀರುವ ಮಾತುಗಳಿಂದಲೇ ಅರ್ಥವಾಗುತ್ತಿದೆ ಎಂದು ಅವರು ಹೇಳಿದರು.

ಜಾತಿ ಮತ್ತು ಲಿಂಗತ್ವ ಕೃತಿಯು ಪ್ರಸ್ತುತ ಸಂದರ್ಭದಲ್ಲಿ ಮಹತ್ವಪೂರ್ಣವಾಗಿದೆ. ಏಕೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಸ್ತಾಪಿಸಿ ಜಾತಿ ಮತ್ತು ಲಿಂಗತ್ವವನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಈಗ ಬಂದೊದಗಿದೆ. ಕೃತಿಯು ಚರ್ಚೆಗೆ ಒಳಪಡಬೇಕು. ಇದೊಂದು ಚಳುವಳಿಯ ಭಾಗವಾಗಿ ಬರಬೇಕು. ಕೇವಲ ದಲಿತರಲ್ಲಿ ಸ್ರ್ತೀವಾದವನ್ನು ತರುವುದಲ್ಲದೆ, ಸವರ್ಣೀಯರಲ್ಲೂ ಸ್ರೀವಾದವನ್ನು ತರಬೇಕು. ಜಾತಿ, ಲಿಂಗವನ್ನು ಒಟ್ಟೊಟ್ಟಿಗೆ ನೋಡುವ ಅಗತ್ಯತೆ ಈಗ ಬಂದೊಂದಗಿದ್ದು, ನಾನು ಎಲ್ಲ ಚಳುವಳಿಗಳಲ್ಲಿ ಜೊತೆಯಾಗಿ ಇರುತ್ತೇನೆ ಎಂದು ಅವರು ತಿಳಿಸಿದರು.

ಕವಯತ್ರಿ ಡಾ. ಕೆ.ವಿ.ನೇತ್ರಾವತಿ ಮಾತನಾಡಿ, ಬ್ರಿಟಿಷ್ ಆಡಳಿತದಿಂದ ಹಿಡಿದು ಆಧುನಿಕ ಮಹಿಳಾ ಚಳುವಳಿಯವರೆಗೂ ಜಾತಿ ಮತ್ತು ಲಿಂಗತ್ವ ರೂಪುಗೊಂಡ ಕುರಿತು ಸವಿಸ್ತಾರವಾಗಿ ಈ ಕೃತಿಯು ವಿವರಿಸುತ್ತದೆ. ಕರ್ನಾಟಕ ನೆಲೆಗಳಲ್ಲಿ ಜಾತಿ ಮತ್ತು ಲಿಂಗತ್ವ ಪಡೆದುಕೊಂಡ ಸ್ವರೂಪ, ಹುಟ್ಟು, ವಿಸ್ತಾರಗೊಂಡ ಬಗೆಯನ್ನು ನಾವು ಗುರುತಿಸಲು ಇದೊಂದು ಮಾದರಿಯ ಕೃತಿಯಾಗಿದೆ ಎಂದರು.

ಇಲ್ಲಿನ ಕಥನಗಳು ಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ರ ಚಳುವಳಿಯ ಪರಿಣಾಮದಿಂದಾಗಿ ಹೊರಹೊಮ್ಮಿದ ಕಥೆಗಳೇ ಆಗಿದೆ. ನಾನು ದಲಿತ ಹೋರಾಟಗಳಲ್ಲಿ ಭಾಗವಹಿಸಿದ ಹೆಣ್ಣುಮಕ್ಕಳ ಆತ್ಮಕಥೆಗಳ ಬಗ್ಗೆ ಅಧ್ಯಯನ ಮಾಡಿದ್ದು, ಈ ಪುಸ್ತಕದಲ್ಲಿಯೂ ಅಂತಹ ಕಥೆಗಳಿವೆ ಎಂದು ಅವರು ತಿಳಿಸಿದರು.

ದಲಿತ ಹೋರಾಟ ಹೊರತುಪಡಿಸಿದಂತೆ ಇತರೆ ಹೋರಾಟಗಳಲ್ಲಿ ಭಾಗವಹಿಸಿದವರು ಜಾತಿ ವಿಚಾರ ಬಂದಾಗ ಹೇಗೆ ಮನುಷತ್ವ ಇಲ್ಲದಂತೆ ವರ್ತಿಸುತ್ತಾರೆ ಎಂದು ನಾನು ಅಧ್ಯಯನ ಮಾಡಿದ ಕತೆಗಳಲ್ಲಿ ಕಂಡುಬಂದಿದೆ. ಚಳುವಳಿಯಲ್ಲಿ ಜಾತಿ ಕಾರಣಕ್ಕೆ ಮಹಿಳೆಯರು ತಮ್ಮ ನಾಯಕರಿಂದ ಅನುಭವಿಸಿದ ಶೋಷಣೆಗಳನ್ನು ಇಲ್ಲಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದರು.

ಪ್ರಾಧ್ಯಾಪಕಿ ಡಾ.ಭಾರತಿ ದೇವಿ ಮಾತನಾಡಿ, ಶರ್ಮಿಳಾ ರೇಗೆ ಅವರು ಪುಣೆ ವಿಶ್ವವಿದ್ಯಾನಿಲಯದ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರಕ್ಕೆ ಬರುವ ಮುನ್ನ ಮಹಿಳಾ ಅಧ್ಯಯನ ಕೇಂದ್ರಗಳಲ್ಲಿ ಪಾಶ್ಚಿಮಾತ್ಯ ಚಿಂತನೆಗಳಿದ್ದವು. ಹೀಗಾಗಿ ಅಕಾಡೆಮಿಕ್ ಹಾಗೂ ವಾಸ್ತವಿಕತೆಗೆ ವ್ಯತ್ಯಾಸಗಳು ಇರುತ್ತಿದ್ದವು ಎಂದರು.

ಮಹಿಳೆಯ ಪರಿಸ್ಥಿತಿಯು ಬೇರೆ ಬೇರೆ ಕಾಲಘಟ್ಟದಲ್ಲಿ ವಿಭಿನ್ನವಾಗಿದೆ. ದಲಿತ ಸ್ತ್ರೀ ನೋಟ ಎನ್ನುವುದು ಒಂದು ಒಟ್ಟು ಕನ್ನೋಟ ಎಂದು ಈ ಪುಸ್ತಕವು ವಿವರಿಸುತ್ತಾರೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಜಾತಿಯನ್ನು ಪಾಲಿಸುವುದಿಲ್ಲ. ಆದರೆ ಕುಟುಂಬ ಮತ್ತು ಆಪ್ತವಲಯಗಳಲ್ಲಿ ಜಾತಿಯನ್ನು ಪಾಲನೆ ಮಾಡುತ್ತಿರುತ್ತಾರೆ. ಇದನ್ನು ಲೇಖಕರು ಛಿದ್ರಗೊಂಡ ಆಧುನಿಕತೆ ಎಂದು ಗುರುತಿದ್ದಾರೆ. ಇಂತಹ ಅನೇಕ ವಿಚಾರಗಳನ್ನು ಕೃತಿ ಬೆಳಕು ಚೆಲ್ಲುತ್ತದೆ.

ಬರಹಗಾರ ಕೆ.ಪಿ.ಲಕ್ಷ್ಮಣ್ ಮಾತನಾಡಿ, ಹೆಣ್ಣನ್ನು ಹೊರತುಪಡಿಸಿ ಜಾತಿಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇದರ ಹಿನ್ನೆಲೆ ಇಟ್ಟುಕೊಂಡು ರಚಿತವಾಗಿರುವ ಜಾತಿ ಮತ್ತು ಲಿಂಗತ್ವ ಪುಸ್ತಕವು ಹಲವು ರಾಜಕಾರಣ ಜತೆಗೆ ದಲಿತ ಹೆಣ್ಣುಮಕ್ಕಳ ಸ್ಥಿತಿಯ ಬಗ್ಗೆಯೂ ಚರ್ಚಿಸುತ್ತದೆ ಎಂದು ಹೇಳಿದರು.

ದೇಶದಲ್ಲಿ ಬ್ರಾಹ್ಮಣರು ಕೆಳವರ್ಗದವರನ್ನು ಕೀಳಾಗಿ ಕಾಣುತ್ತಾರೆ. ಆದರೆ ಬ್ರಾಹ್ಮಣರಲ್ಲಿಯೂ ಹೆಣ್ಣನ್ನು ಕೀಳಾಗಿ ಕಾಣುತ್ತಾರೆ ಎಂಬುದು ನಮಗೆ ತಿಳಿದಿದೆ. ಒಬ್ಬ ಪುರುಷ ತನ್ನ ಜಾತಿಯ ಹೆಣ್ಣನ್ನು ನೋಡುವ ರೀತಿ ಹಾಗೂ ಬೇರೆ ಜಾತಿಯ ಹೆಣ್ಣನ್ನು ರೀತಿ ಬೇರೆಯಾಗಿರುತ್ತದೆ. ಈ ಪುಸ್ತಕದ ಲೇಖನಗಳು ನಮ್ಮ ನಮ್ಮ ಜಾತಿಯ ಹೆಣ್ಣುಮಕ್ಕಳ ಕಡೆಗೆ ಹೋಗುವಂತೆ ಮಾಡುತ್ತದೆ ಎಂದರು.

ಡಾ.ಅನಘ ತಾಂಬೆ ಮಾತನಾಡಿ, ಶರ್ಮಿಳಾ ರೇಗೆ ಮರಣಹೊಂದಿ 11 ವರ್ಷಗಳೇ ಕಳೆದಿದ್ದರೂ, ಅವರು ಬರೆದಂತಹ ಕೃತಿಯು ಈ ಸನ್ನಿವೇಶದಲ್ಲಿಯೂ ಪ್ರಸ್ತುತವಾಗಿದೆ. ಶರ್ಮಿಳಾ ರೇಗೆ ಜನರ ಚಳುವಳಿಗಳನ್ನು ಅಕಾಡೆಮಿಗಳಿಗೆ ಕೊಂಡೊಯ್ದಿದ್ದಾರೆ ಎಂದು ಅವರು ತಿಳಿಸಿದರು.

Full View

ಅನುವಾದಗಳು ಐಕ್ಯತೆಯನ್ನು ಮೂಡಿಸುವ ಉದ್ದೇಶದಿಂದ ಮುಖ್ಯವೆನಿಸುತ್ತವೆ. ಇಂತಹ ಕೃತಿಗಳ ಅನುವಾದಿಂದ ನಮ್ಮ ಚಿಂತನೆಗಳು ವಿಸ್ತಾರಗೊಳ್ಳುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅನುವಾದಕಿ ದು.ಸರಸ್ವತಿ ಸೇರಿದಂತೆ ಮತ್ತಿತರರು ಇದ್ದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News