ಔಷಧ ನಿಯಂತ್ರಣ ಮತ್ತು ಆಹಾರ ಸುರಕ್ಷತೆ ಇಲಾಖೆ ವಿಲೀನ : ಎಚ್.ಕೆ.ಪಾಟೀಲ್
ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರನ್ನು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಯ ಕಾರ್ಯವೈಖರಿಗಳು ಬಹುತೇಕ ಒಂದೇ ರೀತಿಯಲ್ಲಿರುವುದರಿಂದ ಈ ಎರಡು ಇಲಾಖೆಗಳನ್ನು ವಿಲೀನಗೊಳಿಸಿ, ‘ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ’ ಎಂದು ಮರು ಪದನಾಮೀಕರಿಸುವುದರಿಂದ ಇಲಾಖೆಯ ಕಾರ್ಯಗಳನ್ನು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಜಮ್ಮು ಕಾಶ್ಮೀರ, ಗುಜರಾತ್, ಉತ್ತರ ಪ್ರದೇಶ, ಅಸ್ಸಾಂ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗಳು ಒಂದೇ ಇಲಾಖೆಯಡಿ ಕೆಲಸ ಮಾಡುತ್ತಿವೆ. ಅದರಂತೆ, ರಾಜ್ಯದಲ್ಲಿಯೂ ಔಷಧ ನಿಯಂತ್ರಣ ಇಲಾಖೆ ಮತ್ತು ಆಹಾರ ಸುರಕ್ಷತೆ ಇಲಾಖೆಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಅಪರೂಪದ ಮತ್ತು ಹೆಚ್ಚಿನ ವೆಚ್ಚದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಎಸ್ಸಿಎಸ್ಪಿ/ಟಿಎಸ್ಪಿ ಅಡಿಯಲ್ಲಿ ಲಭ್ಯವಿರುವ 47 ಕೋಟಿ ರೂ.ಗಳ ಕಾರ್ಪಸ್‍ಫಂಡ್‍ನ್ನು ಸೃಜಿಸಿ, ಚಿಕಿತ್ಸೆಗೆ ಬಳಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.