ಬಿಜೆಪಿಯಲ್ಲಿ ಒಂದೇ ಕುಟುಂಬದ ದರ್ಬಾರ್: ಸಚಿವ ಕೃಷ್ಣ ಬೈರೇಗೌಡ

Update: 2024-04-03 16:41 GMT

ಬೆಂಗಳೂರು: ರಾಜ್ಯ ಬಿಜೆಪಿ ಒಡೆದ ಮನೆಯಂತಾಗಿದ್ದು, ಒಂದೇ ಕುಟುಂಬದ ದರ್ಬಾರ್ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರೊ.ರಾಜೀವ್ ಗೌಡ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬೃಹತ್ ಸಮಾವೇಶಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಅವರು ಜನರ ಪ್ರತೀಕ. ಅವರು ಸ್ಥಳೀಯರು. ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ನಾವು ಸ್ಥಳೀಯರಿಗೆ ಟಿಕೆಟ್ ನೀಡಿದ್ದೇವೆ. ಬಿಜೆಪಿಯವರು 2004ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ಅವರಿಗೆ ಟಿಕೆಟ್ ಕೊಟ್ಟರು. ಅವರು ನಯಾ ಪೈಸೆ ಕೆಲಸ ಮಾಡಲಿಲ್ಲ. ನಂತರ ಡಿ.ಬಿ.ಚಂದ್ರೇಗೌಡರನ್ನು ಕರೆದುಕೊಂಡು ಬಂದು ನಿಲ್ಲಿಸಿದರು, ಅವರೂ ಸಹ ಕೆಲಸ ಮಾಡಲಿಲ್ಲ ಎಂದು ಕೃಷ್ಣ ಬೈರೇಗೌಡ ದೂರಿದರು.

10 ವರ್ಷ ಡಿ.ವಿ.ಸದಾನಂದ ಗೌಡರನ್ನು ಕ್ಷೇತ್ರದ ಜನರು ಗೆಲ್ಲಿಸಿದರು. ಆದರೆ, ನಯಾಪೈಸೆ ಕೆಲಸ ಮಾಡಲಿಲ್ಲ. ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯವರೇ ಗೋ ಬ್ಯಾಕ್ ಎಂದು ತಿರಸ್ಕರಿಸಿರುವ ಶೋಭಕ್ಕನನ್ನು ಇಲ್ಲಿಗೆ ಕರೆ ತಂದಿದ್ದಾರೆ. ಗೆದ್ದು ಬಂದರೆ ಬೆಂಗಳೂರು ಉತ್ತರಕ್ಕೆ ಬರುತ್ತಾರೋ, ಬೇರೆ ಕಡೆ ಹೋಗುತ್ತಾರೋ. ಬೆಂಗಳೂರು ಉತ್ತರ ನಂತರ ತಮ್ಮ ಮುಂದಿನ ಕ್ಷೇತ್ರ ಯಾವುದು ಹೇಳಿ ಎಂದು ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.

ಕೇಂದ್ರ ಬಿಜೆಪಿ ಸರಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುತ್ತಿದೆ. ಬಡವ ಮನೆ ಕಟ್ಟಲೂ ಆಗುತ್ತಿಲ್ಲ. ಬೆಲೆ ಏರಿಕೆ ಹೊರೆ ನಮ್ಮ ಮೇಲೆ ಹಾಕಿದ್ದಾರೆ. ಉಪ್ಪು, ಜೀರಿಗೆ, ಮೈದಾ ಎಲ್ಲದರ ಮೇಲೆ ಜಿಎಸ್‍ಟಿ ತೆರಿಗೆ ಹಾಕಿದ್ದಾರೆ ಎಂದು ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News