‘ಫೆಂಗಲ್ ಚಂಡಮಾರುತ’ದ ಪರಿಣಾಮ: ರಾಜ್ಯದಲ್ಲಿ ಡಿ.5ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ
ಬೆಂಗಳೂರು: ತಮಿಳುನಾಡು ಕರಾವಳಿ ತೀರದಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಡಿ.5ರವರೆಗೆ ಮೈ ಕೊರೆವ ಚಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಫೆಂಗಲ್ ಪರಿಣಾಮದಿಂದಾಗಿ ಡಿ.2, 3 ಮತ್ತು 4ರಂದು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲಟ್' ಘೋಷಿಸಲಾಗಿದೆ.
ಅಲ್ಲದೆ, ಡಿ.3ರಂದು ಮಾತ್ರ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ವಿಪರೀತ ಗಾಳಿ ಸಮೇತ ಅತ್ಯಧಿಕ ಮಳೆಯಾಗಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ‘ಆರೆಂಜ್ ಅಲರ್ಟ್' ನೀಡಲಾಗಿದೆ.
ತಮಿಳುನಾಡು ಮತ್ತು ಪುದುಚೇರಿಯ ಕರಾವಳಿಯಲ್ಲಿ ಸೈಕ್ಲೋನಿಕ್ ಚಂಡಮಾರುತ ಫೆಂಗಾಲ್‍ನ ಪ್ರಭಾವ ಸ್ಥಿರವಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸಿ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಚಂಡಮಾರುತದಿಂದ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ ಮೇಲೂ ಬೀರಿದೆ.
ಮುಂದಿನ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.