ಸರಕಾರಿ ಶಾಲೆಗಳಲ್ಲಿ ʼಆಂಗ್ಲ ಮಾಧ್ಯಮʼ | ಆದೇಶ ಹಿಂಪಡೆಯಲು ಡಾ.ಪುರುಷೋತ್ತಮ ಬಿಳಿಮಲೆ ಮನವಿ

Update: 2024-06-19 17:05 GMT

ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೆ ಸಾಲಿನಿಂದ ಕನ್ನಡ ಹಾಗೂ ಇತರೆ ಮಾಧ್ಯಮದ ಜೊತೆಗೆ ಆಂಗ್ಲ(ದ್ವಿಭಾಷಾ ಮಾಧ್ಯಮ)ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ.

ಬುಧವಾರ ಸಚಿವ ಮಧು ಬಂಗಾರಪ್ಪ ಅವರನ್ನು ಖುದ್ದು ಭೇಟಿ ಮಾಡಿದ ಬಿಳಿಮಲೆ ಅವರು ಮನವಿ ಸಲ್ಲಿಸಿದರು. ಈ ವೇಳೆ ಸಚಿವರೊಂದಿಗೆ ಚರ್ಚಿಸಿದ ಅವರು, ‘ಮುಖ್ಯವಾಗಿ ಕಲಿಕೆಯು ಕನ್ನಡದಲ್ಲಿ ಇರಬೇಕು. ಮಗುವಿಗೆ ಗೊತ್ತಿರುವ ಭಾಷೆಯಲ್ಲಿ ಕಲಿಸಿದರೆ ಬೌದ್ಧಿಕ ಬೆಳವಣಿಗೆ ಸಾಧ್ಯವಾಗಲಿದೆ. ಭಾಷೆ ಎಂಬುದು ಸಂವಹನದ ಮಾಧ್ಯಮ ಮಾತ್ರವೇ ಅಲ್ಲ’ ಎಂದು ತಿಳಿಸಿದರು.

‘ತಾಯಿ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಅಂತರ್‍ರಾಷ್ಟ್ರೀಯವಾಗಿ ಒಪ್ಪಿಕೊಳ್ಳಲಾಗಿದೆ. ರಾಜ್ಯದ 1,419 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೆ ಸಾಲಿನಿಂದ 1ನೆ ತರಗತಿಯಿಂದ ಈಗ ನಡೆಯುತ್ತಿರುವ ಕನ್ನಡ ಹಾಗೂ ಇತರೆ ಮಾಧ್ಯಮದ ಜೊತೆಗೆ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಜೂ. 15ರ ಆದೇಶ ಪತ್ರದ ಮೂಲಕ ಸರಕಾರ ಈಗಾಗಲೇ ನಿರ್ಣಯ ಕೈಗೊಂಡಿದ್ದು, ಈ ಆದೇಶವು ಕನ್ನಡ ಭಾಷೆಯಲ್ಲಿ ಶಿಕ್ಷಣ ಒದಗಿಸುವುದಕ್ಕೆ ಹಿನ್ನಡೆಯನ್ನುಂಟು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸದರಿ ಆದೇಶವು ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ಕ್ಕೆ ವಿರುದ್ಧವಾಗಿದೆ. ಅಲ್ಲದೆ, ಈ ಆದೇಶವು ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆದು ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದರು.

‘ಭಾಷೆ ಸಂಸ್ಕೃತಿ ಮತ್ತು ಮೌಲ್ಯಯುತ ವ್ಯವಸ್ಥೆಯನ್ನು ಪರಿಚಯಿಸುವ ಸಾಧನವಾಗಿದೆ. ಕನ್ನಡ ಭಾಷೆಯ ನಿರಾಳತೆಯ ಸ್ವಾತಂತ್ರ್ಯವು ಮಗುವಿನಲ್ಲಿ ಆಸಕ್ತಿ, ಉತ್ಸಾಹ ಹಾಗೂ ಸಂಭ್ರಮಗಳನ್ನು ತಂದರೆ, ಇಂಗ್ಲಿಷ್ ಅದನ್ನು ಮೌನಿ ಹಾಗೂ ದುಃಖಿಯನ್ನಾಗಿಸುತ್ತದೆ. ರಾಜ್ಯದ ಮಕ್ಕಳ ಚಿಂತನ ಶಕ್ತಿಗೆ ಕನ್ನಡ ಭಾಷೇಯೇ ಭದ್ರ ಬುನಾದಿ’  ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News