ದ್ವಾರಕೀಶ್ ಹೆಸರಿನಲ್ಲಿ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ : ಶಿವಾನಂದ ತಗಡೂರು

Update: 2024-04-17 16:12 GMT

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ ಮಾಡಲು ಹುಣಸೂರು ಶಾಸಕ ಜಿ.ಡಿ.ಹರೀಶ್‍ಗೌಡ ಮುಂದೆ ಬಂದಿರುವುದಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿದ ಅವರು, ಮೈಸೂರು ಜಿಲ್ಲೆಯ ಹುಣಸೂರಿನ ಶಾಮರಾವ್ ಮತ್ತು ಜಯಮ್ಮ ಅವರ ಪುತ್ರರಾದ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಸೇವೆ ಸಲ್ಲಿಸುವ ಮೂಲಕ ಕಲಾ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಅಪಾರ ಗೌರವ ಪಡೆದಿರುವುದಲ್ಲದೆ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಜೀವನ ಸಾಗಿಸಲು ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದವರು. 1963ರಲ್ಲಿ ಸಿನಿಮಾ ಕಡೆ ಮುಖ ಮಾಡಿದವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಚಲನ ಚಿತ್ರ ನಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಹುಣಸೂರಿನ ಸುಪುತ್ರ ಎನ್ನುವುದರಲ್ಲಿಯೂ ಸೈ ಎನ್ನಿಸಿಕೊಂಡವರಾಗಿದ್ದಾರೆ ಎಂದು ಶಿವಾನಂದ ತಗಡೂರು ನುಡಿದಿದ್ದಾರೆ.

ಹಿರಿಯ ನಟ ದ್ವಾರಕೀಶ್ ಅವರು ಚಲನಚಿತ್ರ ಕಲಾ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿ ಅವರ ಹೆಸರಿನಲ್ಲಿ ಹರೀಶ್ ಗೌಡ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ದತ್ತಿನಿಧಿಗೆ ಉದಾರವಾಗಿ ದೇಣಿಗೆ ನೀಡಿರುವ ಹರೀಶ್‍ಗೌಡರನ್ನು ಅವರು ಅಭಿನಂದಿಸಿದ್ದಾರೆ.

ಸಿನಿಮಾ ರಂಗದ ಬಗ್ಗೆ ವರದಿ ಮಾಡುವ ಕ್ರೀಯಾಶೀಲ ವರದಿಗಾರರೊಬ್ಬರಿಗೆ ಪ್ರತಿ ವರ್ಷ ನಡೆಯುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವಾನಂದ ತಗಡೂರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News