‘ಎತ್ತಿನಹೊಳೆ ಯೋಜನೆ’ಯ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ
ಬೆಂಗಳೂರು: ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಏಳು ಜಿಲ್ಲೆಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರಕಾರ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ, ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ(139 ದಿನಗಳು) 24.01 ಟಿಎಂಸಿ ಪ್ರವಾಹದ ನೀರನ್ನು ಮೇಲ್ಕಂಡ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14 ಟಿಎಂಸಿ ಕುಡಿಯುವ ನೀರನ್ನು ಉದ್ದೇಶಿತ ಯೋಜನೆ ಒದಗಿಸಲಿದೆ.
ಜೊತೆಗೆ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವ 23,251ಕೋಟಿ ರೂ.ಗಳ ಮೊತ್ತದ ಉದ್ದೇಶಿತ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ನಿರ್ಣಾಯಕ ಘಟ್ಟ ತಲುಪಿದೆ.
2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೆ ಹಂತದ ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ ವಿಯರ್-1, 4 ಮತ್ತು 5ರಿಂದ ನೀರನ್ನೆತ್ತಿ(ಒಟ್ಟಾರೆ 35.50 ಕ್ಯುಮೆಕ್ಸ್) ವಿತರಣಾ ತೊಟ್ಟ್ಟಿ-3ರ ವರೆಗೆ ಪೂರೈಸಿ ತದನಂತರ ವಿತರಣಾ ತೊಟ್ಟ್ಟಿ-3ರಿಂದ ನೀರನ್ನೆತ್ತಿ ವಿತರಣಾ ತೊಟ್ಟ್ಟಿ-4ರ ಮುಖಾಂತರ ಗುರುತ್ವ ಕಾಲುವೆಗೆ ನೀರನ್ನು ಹರಿಸಲು ಯೋಜಿಸಲಾಗಿದೆ.
ಗುರುತ್ವ ಕಾಲುವೆಯು ಒಟ್ಟು 252ಕಿ.ಮೀ ಉದ್ದವಿದ್ದು, ಈ ಪೈಕಿ 42 ಕಿ.ಮೀ ವರಗಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ನಂತರದ ಕಾಮಗಾರಿಗಳು ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವ ಕಾಲುವೆಯ 32.50ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ಹಿರಿಯೂರಿನ ವಾಣ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮುಖಾಂತರ ತಾತ್ಕಾಲಿಕವಾಗಿ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಇದರನ್ವಯ ನವೆಂಬರ್-2023ರಿಂದಲೇ ಪೂರ್ವ ಪರಿಕ್ಷಾರ್ಥ ಚಾಲನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ವಿಯರ್-4 ಮತ್ತು 5ರಿಂದ ನೀರನ್ನೆತ್ತಿ ವಿತರಣಾ ತೊಟ್ಟ್ಟಿ-3ರ ವರೆಗೆ ನೀರನ್ನು ಪೂರೈಸಲಾಗಿತ್ತು. ಪ್ರಸ್ತುತ ಇವುಗಳ ಜೊತೆ ವಿಯರ್-1ರಿಂದಲೂ ನೀರನ್ನೆತ್ತಿ ವಿತರಣಾ ತೊಟ್ಟ್ಟಿ-4ರ ವರೆಗೆ ಪೂರೈಸಿ, ಅಲ್ಲಿಂದ ಗುರುತ್ವ ಕಾಲುವೆಗೆ ಆ20ರಂದು ಯಶಸ್ವಿಯಾಗಿ ನೀರು ಹರಿಸಲಾಗಿದ್ದು, ಗುರುತ್ವ ಕಾಲುವೆಯಲ್ಲಿನ ನೀರು 32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ವೇದಾ ವ್ಯಾಲಿಯನ್ನು ಪ್ರವೇಶಿಸಿ ಈಗಾಗಲೇ ಹಳೇಬೀಡು ಮತ್ತು ಬೆಳವಾಡಿ ಕೆರೆಗಳು ತುಂಬಿ ಕೋಡಿ ಬಿದ್ದು, ವಾಣ ವಿಲಾಸ ಸಾಗರದತ್ತ ನೀರು ಹರಿಯುತ್ತಿದೆ.
ಪ್ರಸಕ್ತ ವಿಯರ್-3 ಅನ್ನು ಹೊರತುಪಡಿಸಿ, ಉಳಿದ ಎಲ್ಲ ವಿಯರ್‍ಗಳಿಂದ ಸೆಪ್ಟಂಬರ್-5ರೊಳಗೆ ಪೂರ್ವ ಪರೀಕ್ಷಾರ್ಥವಾಗಿ ನೀರನ್ನೆತ್ತಿ ಗುರುತ್ವ ಕಾಲುವೆಗೆ ಪೂರೈಸಲು ಯೋಜಿಸಲಾಗಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಪೂರ್ವ ಪರೀಕ್ಷಾರ್ಥ ಚಟುವಟಿಗಳನ್ನು ಪೂರ್ಣಗೊಳಿಸಿ, ಶೀಘ್ರದಲ್ಲಿಯೇ ಅಧಿಕೃತವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಯೋಜನೆಯ ಕಾಮಗಾರಿಗಳಿಗೆ ಪ್ರಾಯೋಗಿಕ ಚಾಲನೆ ನೀಡಿ ರಾಜ್ಯಕ್ಕೆ ಸಮರ್ಪಿಸಲಿದ್ದಾರೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಜುಲೈ-2024ರ ಅಂತ್ಯದ ವರೆಗೆ ಒಟ್ಟಾರೆ ಸಂಚಿತ 16,152 ಕೋಟಿ ರೂ.ಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಯೋಜನೆಯನ್ನು 2026-27ನೆ ಸಾಲಿನಲ್ಲಿ 2027ರ ಮಾರ್ಚ್ 31ರ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.
ಎತ್ತಿನಹೊಳೆ ಯೋಜನೆಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿರುವ 8 ವಿಯರ್ ಗಳ ಹತ್ತಿರ ನೀರಿನ ಹರಿವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ ಜರ್ಮನ್ ತಂತ್ರಜ್ಞಾನವನ್ನೊಳಗೊಂಡ ʼTelemetryʼ ವ್ಯವಸ್ಥೆಯನ್ನು 2018ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನ ಮುಂಗಾರಿನ ಹಂಗಾಮಿನಲ್ಲಿ ಜೂನ್-1ರಿಂದ ಆಗಸ್ಟ್-20ರವರೆಗೆ 13.34 ಟಿಎಂಸಿ ನೀರು ದಾಖಲಾಗಿರುವ ಪೈಕಿ ತಿರುವುಗೊಳಿಸಬಹುದಾದಂತಹ ನೀರಿನ ಪ್ರಮಾಣವು 9.23 ಟಿಎಂಸಿ ಗಳಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.