ಮತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು : ನಸೀರ್ ಅಹ್ಮದ್

Update: 2024-04-08 14:41 GMT

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಅಸ್ತಿತ್ವವೇ ಮತದಾರರ ಪಟ್ಟಿಯಲ್ಲಿ ಇರುತ್ತದೆ. ಸರಕಾರ ರಚಿಸಲು ಹಾಗೂ ಬದಲಾಯಿಸಲು ಇರುವಂತ ಅತ್ಯಂತ ಪ್ರಬಲ ಅಸ್ತ್ರವೇ ‘ನಮ್ಮ ಮತ’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ತಿಳಿಸಿದರು.

ರವಿವಾರ ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಸಮದ್ ಹೌಸ್‍ನಲ್ಲಿ ಫೋರಂ ಫಾರ್ ಮೈನಾರಿಟೀಸ್ ರೈಟ್ಸ್, ಡೆಮಾಕ್ರಟಿಕ್ ಅಂಡ್ ಪೊಲಿಟಿಕಲ್ ಎಂಪವರ್ಮೆಂಟ್ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಹಾಗೂ ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಿಗೆ ಎ.26ರಂದು ಮತದಾನ ನಡೆಯಲಿದೆ. ಮುಂದಿನ ದಿನಗಳಲ್ಲಿ ನಾವು ಚುನಾವಣೆಗಳ ಕುರಿತು ಬಹಿರಂಗವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಿದೆಯೋ? ಇಲ್ಲವೋ? ಗೊತ್ತಿಲ್ಲ. ಆದುದರಿಂದ, ನಾವೆಲ್ಲ ಒಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಗೆ ಹೋರಾಡಬೇಕಿದೆ ಎಂದು ಅವರು ಕರೆ ನೀಡಿದರು.

ನಮ್ಮ ಹಾಗೂ ನಮ್ಮ ಕುಟುಂಬದ ಅರ್ಹ ಮತದಾರರು ಎಲ್ಲರೂ ಮತದಾನದ ದಿನ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಶುಕ್ರವಾರದ ದಿನ ಮತದಾನ ನಡೆಯಲಿದೆ. ಹಾಗಾಗಿ, ಯಾವುದೆ ಕಾರಣಕ್ಕೂ ಮಧ್ಯಾಹ್ನದ ನಂತರ ಹೋಗಿ ಮತದಾನ ಮಾಡುತ್ತೇವೆ ಎಂದು ಆರಾಮಾಗಿ ಇರಬೇಡಿ. ಬೆಳಗ್ಗೆಯೇ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿ ಎಂದು ನಸೀರ್ ಅಹ್ಮದ್ ಹೇಳಿದರು.

ಫೋರಂ ಫಾರ್ ಮೈನಾರಿಟೀಸ್ ರೈಟ್ಸ್, ಡೆಮಾಕ್ರಟಿಕ್ ಅಂಡ್ ಪೊಲಿಟಿಕಲ್ ಎಂಪವರ್ಮೆಂಟ್ ವೇದಿಕೆಯ ಅಧ್ಯಕ್ಷ ಎಸ್.ಆರ್.ಮೆಹ್ರೋಝ್ ಖಾನ್ ಮಾತನಾಡಿ, ಸಂಘ ಸಂಸ್ಥೆಗಳು, ಉಲಮಾಗಳು, ಜನಪ್ರತಿನಿಧಿಗಳ ಪರಿಶ್ರಮದಿಂದ ಮತದಾನದ ಪ್ರಮಾಣ ಹೆಚ್ಚಾಗಿದೆ. ಅದರ ಪರಿಣಾಮವಾಗಿಯೇ ಇವತ್ತು ಇಲ್ಲಿ ಸರಕಾರ ಬದಲಾಯಿಸಲು ಸಾಧ್ಯವಾಯಿತು. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡಬೇಕಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿದರೆ ಮಾತ್ರ ನಾವು ಸುಭದ್ರವಾಗಿ ಇರಲು ಸಾಧ್ಯ. ಆದುದರಿಂದ, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಲು ನಾವು ಮತದಾನ ಮಾಡಬೇಕಿದೆ. ಇಲ್ಲಿ ನಾನು ಯಾವುದೆ ಒಬ್ಬ ಅಭ್ಯರ್ಥಿ ಪರವಾಗಿ ಮಾತನಾಡಲು ನಿಂತಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ, ಸಮುದಾಯ ಹಾಗೂ ದೇಶದ ಸುರಕ್ಷತೆಯ ದೃಷ್ಟಿಯಿಂದ ನಿಂತಿದ್ದೇನೆ ಎಂದು ಅವರು ಹೇಳಿದರು.

ಆದುದರಿಂದ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇರುವಂತ ಮಸೀದಿಗಳ ಆಡಳಿತ ಸಮಿತಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಆಗ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಮೆಹ್ರೋಝ್ ಖಾನ್ ತಿಳಿಸಿದರು.

ಇಫ್ತಾರ್ ಕೂಟದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಫಾಲ್ಕರ್ ಶಾಹೀನ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‍ನ ರಾಜ್ಯ ಪದಾಧಿಕಾರಿ ಸೈಯದ್ ಶಾಹಿದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News