ಬೆಂಗಳೂರಿನಲ್ಲಿ ಮತ್ತೊಂದು ಶಾಲೆಗೆ ಹುಸಿ ಬಾಂಬ್ ಕರೆ : ಎಫ್‍ಐಆರ್ ದಾಖಲು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಶಾಲೆಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಕರೆ ಬೆದರಿಕೆವೊಡ್ಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಇಲ್ಲಿನ ಯಶವಂತಪುರದಲ್ಲಿರುವ ಕೇಂದ್ರೀಯ ವಿದ್ಯಾಲಯ(ಐಐಎಸ್ಸಿ) ಶಾಲೆಯ ವಿದ್ಯಾಲಯದ ಅಧಿಕೃತ ಇ-ಮೇಲ್ ಐಡಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ. 'ಶಾಲೆಯ ಒಳಗಡೆ ಒಂದು ಬಾಂಬ್ ಇಡಲಾಗಿದೆ. ನಾಳೆ ಬೆಳಿಗ್ಗೆ 10:20ಕ್ಕೆ ಸ್ಫೋಟವಾಗಲಿದೆ' ಎಂದು ಇಮೇಲ್‍ನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ತಕ್ಷಣ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದು, ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಿದ್ದಾರೆ.
ಘಟನೆ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದ ವಿಶೇಷ ತಂಡದಿಂದ ತನಿಖೆ ನಡೆಯುತ್ತಿದೆ. ಬೆದರಿಕೆ ಸಂದೇಶ ಕಳುಹಿಸಲಾದ ಇಮೇಲ್ ಸರ್ವಿಸ್ ಪ್ರೊವೈಡರ್ ನಿಂದ ಅದರ ಬಳಕೆದಾರರ ಮಾಹಿತಿ ಕೋರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.