ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ

Update: 2024-05-29 15:04 GMT

ಸಾಂದರ್ಭಿಕ ಚಿತ್ರ(PTI)

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಶೌಚಾಲಯದ ಕನ್ನಡಿ ಮೇಲೆ ವಿಮಾನ ನಿಲ್ದಾಣದೊಳಗೆ ಬಾಂಬ್ ಇರಿಸಿರುವ ಸಂದೇಶ ಬರೆಯಲಾಗಿದ್ದು, ಈ ಕುರಿತಾಗಿ ತಕ್ಷಣಕ್ಕೆ ತಪಾಸಣೆ ನಡೆಸಿದ ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಿರುವುದು ವರದಿಯಾಗಿದೆ.

ಮೇ 29ರ ಬುಧವಾರ ಬೆಳಗಿನ ಜಾವ 3.40ರ ಸುಮಾರಿಗೆ ಈ ಸಂದೇಶ ಬರೆಯಲಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‍ಗಳ ತೀವ್ರ ತಪಾಸಣೆ ನಡೆಸಿದ ಬಳಿಕ ಬೆಳಗ್ಗೆ 7 ಗಂಟೆಯ ಸುಮಾರಿಗೆ ಇದೊಂದು ಸುಳ್ಳು ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿರುವುದಾಗಿ ತಿಳಿದುಬಂದಿದೆ.

ಈ ಘಟನೆಯು ವಿಮಾನ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇತ್ತೀಚಿನ ಸುಮಾರು 15 ದಿನಗಳ ಅವಧಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿರುವ ಎರಡನೇ ಹುಸಿ ಬಾಂಬ್ ಬೆದರಿಕೆ ಇದಾಗಿದ್ದು, ಕೆಲ ಕಾಲ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.

ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News