ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪ : ಬ್ಯಾಂಕ್ ಸಿಇಒ ಸೇರಿ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲು

Update: 2024-05-29 14:31 GMT

ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ದುರ್ಬಳಕೆ ಆರೋಪದಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಒ ಸೇರಿ ಆರು ಮಂದಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ನಕಲಿ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಬೇರೆ, ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ ಆರೋಪದಡಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ವಿರುದ್ಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ಎಂಬುವರು ನೀಡಿದ ದೂರಿನ ಮೇರೆಗೆ ನಗರದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮನಿಮೇಖಲೈ ಹಾಗೂ ಬ್ಯಾಂಕ್ ಸಿಬ್ಬಂದಿಗಳಾದ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್‍ರುದ್ರ, ಪಂಕಜ್ ದ್ವಿವೇದಿ ಹಾಗೂ ಸುಚಿಶಿತ ರಾವ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕನ ದೂರಿನಲ್ಲೇನಿದೆ..!

ಬೆಂಗಳೂರಿನ ವಸಂತ ನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಖಾತೆಯಿದ್ದು, 2024ರ ಫೆ.2ರಂದು ಈ ಖಾತೆಯನ್ನು ಎಂ.ಜಿ.ರೋಡ್ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಬ್ಯಾಂಕ್ ಖಾತೆಯನ್ನು ನಿಗಮದ ಪರವಾಗಿ ನಿರ್ವಹಣೆ ಮಾಡಲಾಗುತಿತ್ತು. ಫೆ.26ರಂದು ಬ್ಯಾಂಕ್‍ನವರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದುಕೊಂಡಿದ್ದು, ತದ ನಂತರ ಖಾತೆಯಿಂದ ಮಾರ್ಚ್ 4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮೇ 21ರಂದು 50 ಕೋಟಿ ರೂ. ಹಾಗೂ ಮೇ 22ರಂದು 33 ಕೋಟಿ ರೂ. ಸೇರಿದಂತೆ ಒಟ್ಟು ನಿಗಮದ ಬ್ಯಾಂಕ್ ಖಾತೆಯಿಂದ 187.33 ಕೋಟಿ ರೂ. ಹಣ ವರ್ಗಾವಣೆಯಾಗಿದೆ.

ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಬ್ಯಾಂಕ್‍ಗೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ. ನಿಗಮದ ಅಧಿಕೃತ ವಿಳಾಸಕ್ಕೆ ಪಾಸ್ ಬುಕ್, ಚೆಕ್ ಬುಕ್ ಸೇರಿದಂತೆ ಇನ್ನಿತರ ಯಾವುದೇ ದಾಖಲಾತಿಗಳನ್ನು ಬ್ಯಾಂಕ್‍ನಿಂದ ಕಳುಹಿಸಿಲ್ಲ. ಅಲ್ಲದೇ, ಭೌತಿಕವಾಗಿ ನಿಗಮದ ವತಿಯಿಂದ ಯಾವ ವ್ಯಕ್ತಿಯು ನಿಗಮದ ಹಣವನ್ನು ವಿತ್ ಡ್ರಾ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದೆ.

ಆದರೂ, ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಂತರ ಅಕ್ರಮ ಹಣ ವರ್ಗಾವಣೆ ಮಾಡಿ ಬರೋಬ್ಬರಿ 94,73,08,500 ರೂಪಾಯಿ ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ದಾಖಲಾತಿ ನೀಡುವಂತೆ ಕೋರಿದ್ದರೂ ಈವರೆಗೂ ಮಾಹಿತಿ ನೀಡಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮರು ಠೇವಣಿ ಮಾಡುವಂತೆ ಬ್ಯಾಂಕ್ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದರೂ ವಿಫಲಗೊಂಡಿದ್ದು, ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸದೇ, ಲೋಪವೆಸಗಲಾಗಿದೆ. ಇದರಿಂದ ನಿಗಮಕ್ಕೆ ಆರ್ಥಿಕ ನಷ್ಟಕ್ಕೆ ಬ್ಯಾಂಕ್‍ನವರೇ ಕಾರಣರಾಗಿದ್ದು, ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ರಾಜಶೇಖರ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News