ಬೆಂಗಳೂರು | FSSAI ಹೆಸರಿನಲ್ಲಿ ನಕಲಿ ವಿದೇಶಿ ಆಹಾರ ಪದಾರ್ಥಗಳ ಮಾರಾಟ : ಆರೋಪಿಯ ಬಂಧನ

Update: 2024-07-10 14:16 GMT
ಸಾಂದರ್ಭಿಕ ಚಿತ್ರ (PC: Meta AI)

ಬೆಂಗಳೂರು  : ವಿದೇಶಗಳಿಂದ ಚಾಕೊಲೇಟ್, ಬಿಸ್ಕೆಟ್, ಪಾನೀಯ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ(ಎಫ್‍ಎಸ್‍ಎಸ್‍ಎಐ) ನಕಲಿ ಸ್ಟಿಕ್ಟರ್‌ ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್ ಹಾಗೂ ಮಾಲ್‍ಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ನರೇಂದ್ರ ಸಿಂಗ್(45) ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪಿ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ ಮೂಲದ ಈತ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಈತನಿಂದ 1 ಕೋಟಿ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಐದಾರು ವರ್ಷಗಳಿಂದ ಈ ದಂಧೆಯಲ್ಲಿ ಸಕ್ರಿಯನಾಗಿದ್ದ. ವಿದೇಶಗಳಿಂದ ಚಾಕೊಲೇಟ್, ಬಿಸ್ಕೆಟ್ ಹಾಗೂ ತಂಪುಪಾನೀಯ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಹಡಗಿನ ಮೂಲದ ಮುಂಬೈ ಬಂದರಿಗೆ ತರಿಸಿಕೊಂಡು ಅಲ್ಲಿಂದ ವಾಹನಗಳ ಮೂಲಕ ನಗರಕ್ಕೆ ತರಿಸಿಕೊಳ್ಳುತ್ತಿದ್ದ ಆರೋಪಿ, ಬಳಿಕ ಸುಧಾಮನಗರದಲ್ಲಿರುವ ಗೋದಾಮಿನಲ್ಲಿ ಅದನ್ನು ಶೇಖರಿಸುತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ

ವಿದೇಶದಿಂದ ನಗರಕ್ಕೆ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳಲು ವಾಮಮಾರ್ಗ ಅನುಸರಿಸಿದ್ದ ಆರೋಪಿಯು ಯಾವುದೇ ರೀತಿಯ ಸುಂಕ ಪಾವತಿಸದಿರುವುದು ಗೊತ್ತಾಗಿದೆ. ಗೋದಾಮಿನಲ್ಲಿ ಶೇಖರಿಸಲಾದ ಆಹಾರ ಪದಾರ್ಥಗಳ ಮೇಲೆ ಎಫ್‍ಎಸ್‍ಎಸ್‍ಎಐ ಸ್ಟಿಕ್ಕರ್‌ ಗಳನ್ನು ಅಂಟಿಸಿ ಆರೋಪಿಯು ನಗರದ ಸೂಪರ್ ಮಾರ್ಕೆಟ್ ಹಾಗೂ ಮಾಲ್‍ಗಳಿಗೆ ದುಬಾರಿ ಬೆಲೆಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News