ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಸ್ಪಷ್ಟನೆ ರವಾನೆ : ಗೃಹ ಸಚಿವ ಜಿ.ಪರಮೇಶ್ವರ್

Update: 2024-09-01 13:35 GMT

ಬೆಂಗಳೂರು : ರಾಜ್ಯಪಾಲರು ದೂರುಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಿದ್ದು, ಲೋಕಾಯುಕ್ತದವರು ಈ ಸಂಬಂಧ ಸ್ಪಷ್ಟಿಕರಣ ನೀಡಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಾಯುಕ್ತದಿಂದ ದೂರುಗಳ ಕಡತ ಹೋಗಿದೆ. ಇದಾದ ನಂತರ, ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿದ್ದೇವೆಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಲೋಕಾಯುಕ್ತದಿಂದ ಸ್ಪಷ್ಟೀಕರಣ ಬರುವವರೆಗೂ ವಿಷಯ ತಿರಸ್ಕಾರ ಆಗುವುದಿಲ್ಲ. ರಾಜ್ಯಪಾಲರ ಬಳಿ ಇದ್ದಂತೆಯಲ್ಲವೇ? ಇದನ್ನೆ ರಾಜ್ಯಪಾಲರು ನನ್ನ ಬಳಿ ದೂರುಗಳು ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ವಿವರಿಸಿದರು.

ರಾಜ್ಯಪಾಲರ ಕಚೇರಿಯಿಂದ ಮೂರು ದೂರುಗಳ ಕುರಿತು ಸ್ಪಷ್ಟನೆ ಕೇಳಿದ್ದಾರೆ ಎಂದಾದರೆ ಲೋಕಾಯುಕ್ತದವರು ಸುಮ್ಮನೆ ಇರಲು ಬರುವುದಿಲ್ಲ. ಸ್ಪಷ್ಟಿಕರಣ ನೀಡಬೇಕಾಗುತ್ತದೆ. ತದನಂತರದ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು. ರಾಜ್ಯಪಾಲರು ಒಂದು ಕಡತ ಮಾತ್ರ ಇದೆ ಎಂಬುದನ್ನು ನಿನ್ನೆ ತಿಳಿಸಿದರು. ಎಚ್.ಡಿ.ಕುಮಾರಸ್ವಾಮಿಯವರದ್ದು ಎಂಬುದು ಗೊತ್ತಾಗಿದೆ. ಅದಕ್ಕಾದರೂ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಕಾನೂನು ರೀತಿ ಇದೆಯೇ? ಕಾನೂನು ಬಾಹಿರವಾಗಿದೆಯೇ ಎಂಬುದನ್ನು ಲೋಕಾಯುಕ್ತದವರು ತಿಳಿಸಿದ್ದಾರೆ. ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.

‘ಸಿದ್ದಾರ್ಥ ಟ್ರಸ್ಟ್’ಗೆ ನೀಡಿರುವ ಕೆಐಎಡಿಬಿ ನಿವೇಶನದ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆ ಆಗಿಲ್ಲ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ಸಿಎಂ ಬಳಿ ಪ್ರಸ್ತಾಪ ಆಗಿಲ್ಲ ಎಂದ ಅವರು, ಕೋರ್ಟ್ ತೀರ್ಪು ಆಧರಿಸಿ, ಮುಂದಿನ ಬೆಳವಣಿಗೆಗಳನ್ನು ನೋಡಿ ರಾಷ್ಟ್ರಪತಿ ಭೇಟಿಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

‘ಮುಖ್ಯಮಂತ್ರಿಯವರು ಯಾವುದೇ ಆತಂಕದಲಿಲ್ಲ. ಎಲ್ಲ ವಿಚಾರದಲ್ಲೂ ಸ್ಪಷ್ಟವಾಗಿದ್ದಾರೆ. ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಯಾವುದೇ ರೀತಿಯ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News