ಎಸ್ಸೆಂ ಕೃಷ್ಣ ನಿಧನ: ಡಿ.11ಕ್ಕೆ ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Update: 2024-12-10 14:14 GMT

ಬೆಳಗಾವಿ (ಸುವರ್ಣ ವಿಧಾನಸೌಧ): ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿದ್ದ ಎಸ್.ಎಂ ಕೃಷ್ಣ ಅವರ ನಿಧನಕ್ಕೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ, ಮೃತರ ಗೌರವಾರ್ಥ ನಾಳೆ(ಡಿ.11) ಎಲ್ಲ ಸರಕಾರಿ ಕಚೇರಿಗಳು ಮತ್ತು ಎಲ್ಲ ಶಾಲಾ-ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ.

ಮಂಗಳವಾರ ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಶಿಷ್ಟಾಚಾರ) ಸರಕಾರದ ಉಪ ಕಾರ್ಯದರ್ಶಿ ಎಲಿಷಾ ಅಂಡ್ರೂಸ್ ಆದೇಶ ಹೊಡಿಸಿದ್ದು, ಈ ಸಂದರ್ಭದಲ್ಲಿ ಸರಕಾರದ ಕಟ್ಟದ ಮೇಲೆ ಅರ್ಧಮಟ್ಟದಲ್ಲಿ ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಜತೆಗೆ ಯಾವುದೇ ಸರಕಾರಿ ಮನೋರಂಜನೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಎಸ್ಸೆಂ ಕೃಷ್ಣ ಅವರು ಮಂಗಳವಾರ(ಡಿ.10) ಮಧ್ಯರಾತ್ರಿ 2.30ಕ್ಕೆ ನಿಧನರಾಗಿದ್ದಾರೆ. ಇದಕ್ಕೆ ರಾಜ್ಯ ಸರಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ನಾಳೆ (ಡಿ.11) ಹುಟ್ಟೂರಾದ ಮಂಡ್ಯ ಜಿಲ್ಲೆಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಡಿ.10, 11 ಹಾಗೂ 12 ರಂದು ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

‘ರಾಜ್ಯಾದ್ಯಂತ ನಾಳೆ(ಡಿ.11) ಎಲ್ಲ ಸರಕಾರಿ ಕಚೇರಿಗಳು ಮತ್ತು ಎಲ್ಲ ಶಾಲಾ-ಕಾಲೇಜುಗಳಿಗೆ (ಎಲ್ಲ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ’ ಎಂದು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News