ಬೆಂಗಳೂರಿನಲ್ಲಿರುವ ‘ಪಿ.ಜಿ.ಗಳಿಗೆ’ ಮಾರ್ಗಸೂಚಿ ಪ್ರಕಟ

Update: 2024-08-09 14:24 GMT

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿರುವ ‘ಪೇಯಿಂಗ್ ಗೆಸ್ಟ್’(ಪಿಜಿ)ಗಳನ್ನು ತೆರೆಯಲು ಹಾಗೂ ನಿರ್ವಹಣೆ ಮಾಡುವ ಕುರಿತಾಗಿ ಬಿಬಿಎಂಪಿಯು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪಿಜಿಗಳಲ್ಲಿನ ಎಲ್ಲ ಪ್ರವೇಶ, ನಿರ್ಗಮನ ದ್ವಾರ, ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿರಬೇಕು ಎಂದು ತಿಳಿಸಿದೆ.

ಪ್ರತಿಯೊಂದು ಸಿ.ಸಿ ಟಿ.ವಿ. ಕ್ಯಾಮರಾದ ವೀಡಿಯೋ ಮತ್ತು ಫೂಟೇಜ್‍ಗಳನ್ನು 90 ದಿನಗಳ ವರೆಗೆ ಹಾರ್ಡ್ ವೇರ್ ಮತ್ತು ಸಾಫ್ಟ್‌ ವೇರ್ ಬ್ಯಾಕಪ್ ಸ್ಟೋರೆಜ್‍ನ್ನು ಸಂರಕ್ಷಿಸಬೇಕು. ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪಿಜಿಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರಬೇಕು. ಕಟ್ಟಡದಲ್ಲಿ ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿಯನ್ನು ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಬೇಕು. ಪೇಯಿಂಗ್ ಗೆಸ್ಟ್‌ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರಬೇಕು. ಪ್ರತಿಯೊಬ್ಬ ನಿವಾಸಿಗೆ 135ಎಲ್‍ಪಿಸಿಡಿ ನೀರಿನ ಲಭ್ಯತೆ ಇರುವುದನ್ನು ಮಾಲಕರು, ಉದ್ದಿಮೆದಾರರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.

ಪಿಜಿಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 3 ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ(ಎಫ್‍ಎಸ್‍ಎಸ್‍ಎಐ) ಲೈಸನ್ಸ್‌ ಅನ್ನು ಪಡೆದುಕೊಳ್ಳಬೇಕು. ಉದ್ದಿಮೆದಾರರು, ಮಾಲೀಕರು ಪೇಯಿಂಗ್ ಗೆಸ್ಟ್‌ ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಪಕ್ಷ ಒಬ್ಬ ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24/7 ಸೇವೆಯಡಿಯಲ್ಲಿ ನಿಯೋಜಿಸಿರಬೇಕು.

ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಕಟ್ಟಡದಲ್ಲಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ-1533 ಮತ್ತು ಪೊಲಿಸ್ ಇಲಾಖೆಯ ಸಹಾಯವಾಣಿ 101 ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿರಬೇಕು.

ಪೇಯಿಂಗ್ ಗೆಸ್ಟ್‌ ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಆಳವಡಿಸಿರಬೇಕು. ಪೇಯಿಂಗ್ ಗೆಸ್ಟ್‌ ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಸಲು ಕ್ರಮವಹಿಸಬೇಕು. ಆರೋಗ್ಯ ವಿಭಾಗದ ಅಧಿಕಾರಿಗಳು ತಮ್ಮ-ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಖಚಿತಪಡಿಸಿಕೊಳ್ಳಬೇಕು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020ರ ಕಾಯ್ದೆಯಡಿ, ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಪಿಜಿಗಳಿಗೆ ‘ಪರವಾನಿಗೆ ಮಂಜೂರಾತಿ, ನವೀಕರಣ' ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪಿಜಿಗಳಿಗೆ ಅನ್ವಯವಾಗಿಲಿದೆ. ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವ ಉದ್ದಿಮೆದಾರರ ವಿರುದ್ಧ ಕಾಯ್ದೆಯ ಸೆಕ್ಷನ್ 307, 308ರಂತೆ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News