ಹಾಸನದ ʼಪೆನ್‍ಡ್ರೈವ್ʼ ಪ್ರಕರಣದ ರೂವಾರಿ ಡಿ.ಕೆ.ಶಿವಕುಮಾರ್ : ದೇವರಾಜೇಗೌಡ ಆರೋಪ

Update: 2024-05-06 15:17 GMT

ಬೆಂಗಳೂರು : ಹಾಸನದ ಪೆನ್‍ಡ್ರೈವ್ ಪ್ರಕರಣದ ರೂವಾರಿ ಹಾಗೂ ಕಥಾನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಿದ್ದು, ಪ್ರಧಾನಿ ಮೋದಿಗೆ ಕಪ್ಪುಮಸಿ ಬಳಿಯಲೆಂದು ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋದ ಪೆನ್‍ಡ್ರೈವ್ ಪಡೆದುಕೊಂಡು ಲೋಕಸಭಾ ಚುನಾವಣೆಯ ಮತದಾನಕ್ಕೆ 3 ದಿನ ಇರುವಾಗ ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸರಕಾರ ಹಾಗೂ ಕಾಂಗ್ರೆಸ್‍ನ ನಾಯಕರಿಗೆ ರೇವಣ್ಣ ವಿಚಾರ ಬೇಕಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಹಾಗೂ ನೇರವಾಗಿ ಮೋದಿಯವರು ಇಂತಹವರಿಗೆ ರಕ್ಷಣೆ ನೀಡುತ್ತಿದ್ದಾರೆಂದು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡುವುದು ಬೇಕಾಗಿದೆ. ಇದಕ್ಕಾಗಿ ಡಿ.ಕೆ. ಶಿವಕುಮಾರ್, ಎಲ್.ಆರ್.ಶಿವರಾಮೇಗೌಡರನ್ನು ಕಳುಹಿಸಿ ನನ್ನನ್ನು ಅವರೊಂದಿಗೆ ಕೈಜೋಡಿಸಲು ಕೇಳಿಕೊಂಡಿದ್ದರು ಎಂದರು.

ಎಲ್.ಆರ್.ಶಿವರಾಮೇಗೌಡ ಮಧ್ಯಸ್ಥಿಕೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಸಂಪರ್ಕಿಸಿದ್ದರು. ಶಿವರಾಮೇಗೌಡ ನನ್ನ ಬಳಿ 10 ಬಾರಿ ಸಂಧಾನಕ್ಕೆ ಕಳುಹಿಸಿದ್ದಾರೆ. ಶಿವರಾಮೇಗೌಡರು ಬಂದು ‘ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡ, ನೀನು ಸರಕಾರದ ಪರವಾಗಿ ಇರಬೇಕು. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ’ ಎಂಬುದಾಗಿ ಕೇಳಿಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಂತೆಯೇ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮೋದಿಯವರ ಮುಖಕ್ಕೆ ಮಸಿ ಬಳಿಯಲು ಡಿ.ಕೆ.ಶಿವಕುಮಾರ್ ಈ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಮ್ಮೊಂದಿಗೆ ಕೈಜೋಡಿಸಿದರೆ ನಿನಗೆ ಎಲ್ಲ ರೀತಿಯ ಸಹಕಾರ ಮಾಡುತ್ತೇವೆ ಎಂದು ನನ್ನನ್ನು ಕರೆದಿದ್ದಾರೆ ಎಂದು ದೇವರಾಜೇಗೌಡ ತಿಳಿಸಿದರು.

ಪ್ರಜ್ವಲ್ ರೇವಣ್ಣ, ಮಾಜಿ ಕಾರು ಚಾಲಕ ಕಾರ್ತಿಕ್ ಅವರೊಂದಿಗೆ ಇರುವುದಾಗಿ ಎಲ್.ಆರ್. ಶಿವರಾಮೇಗೌಡ ಅವರೇ ಹೇಳಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅವರು ನನ್ನೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದ ಸಂಭಾಷಣೆಯಿದೆ ಎಂದು ದೇವರಾಜೇಗೌಡ ಅವರು ಆಡಿಯೋ ತುಣುಕನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ಒಬ್ಬ ಕೊಲೆಗಾರ ವಕೀಲನ ಬಳಿ ಬಂದಾಗ, ನಮ್ಮ ವಕೀಲ ವೃತ್ತಿಯಲ್ಲಿ ಏನು ಮಾಡಬೇಕು ಅದನ್ನು ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್‍ಡ್ರೈವ್ ಹಾಗೂ ಕೆಲವು ದಾಖಲೆಗಳ ಫೈಲ್ ಅನ್ನು ಕೊಡುತ್ತಾರೆ. ಇದಕ್ಕೆ ಪೂರಕವಾದ ಮತ್ತೊಂದಿಷ್ಟು ದಾಖಲೆಗಳ ಕೊಡಿ ಎಂದು ಕೇಳಿದ್ದೆ. ಕಾರ್ತಿಕ್ ನನ್ನ ಮನೆಗೆ ಯಾವಾಗ ಬಂದ?, ನನ್ನ ಮನೆಯಲ್ಲಿ ಕುಳಿತು ಮಾತನಾಡಿರುವ ವಿಡಿಯೋ ಸಿಬಿಐಗೆ ಕೊಡುತ್ತಿದ್ದೇನೆ. ನಮಗೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಎಸ್‍ಐಟಿ ತನಿಖೆ ಬೇಡ. ಎಸ್‍ಐಟಿ ತನಿಖಾಧಿಕಾರಿಗಳಿಗೆ ದಿನಕ್ಕೆ ನೂರಾರು ಸಲ ರಾಜಕೀಯ ನಾಯಕರ ಕರೆಗಳು ಬರುತ್ತಿವೆ. ಈ ಪ್ರಕರಣದ ಪಾರದರ್ಶಕ ತನಿಖೆ ನಡೆಯುವ ನಂಬಿಕೆಯಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದೇವರಾಜೇಗೌಡ ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‍ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಯಾರು ಯಾರನ್ನು ಆರೋಪಿಯನ್ನಾಗಿ ಮಾಡಬೇಕು?, ಈ ಪ್ರಕರಣದಲ್ಲಿ ಯಾರನ್ನು ಫಿಟ್ ಮಾಡಬೇಕು? ಎಂಬುದಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿ ನಿರ್ಧರಿಸಿದ್ದಾರೆ ಎಂದು ದೇವರಾಜೇಗೌಡ ದೂರಿದರು.

ಇದರಲ್ಲಿ ಮುಖ್ಯವಾಗಿ ಮೋದಿ ಅವರನ್ನು ಟಾರ್ಗೆಟ್ ಮಾಡಲಾಗಿದೆ. ವಿಡಿಯೋ ಹಂಚಿಕೆ ವಿಚಾರವಾಗಿ ಈಗ ನನ್ನನ್ನೇ ಎ1 ಆರೋಪಿಯಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಇವರು ಸಂತ್ರಸ್ತರಿಗೆ ಹಣ ಕೊಟ್ಟು ಕರೆದುಕೊಂಡು ಬರುತ್ತಿದ್ದಾರೆ. ಹಾಸನದ ಯಾವ ಹೋಟೆಲ್‍ನಲ್ಲಿ ಸಂತ್ರಸ್ತೆಯರೊಂದಿಗೆ ಎಷ್ಟು ಗಂಟೆ ಮಾತನಾಡಿದ್ದಾರೆ ಅನ್ನುವುದು ಸಿಸಿಟಿವಿಯಲ್ಲಿ ಗೊತ್ತಾಗಿದೆ. ರಾಜ್ಯ ಸರಕಾರ ಪ್ರಕರಣ ದಿಕ್ಕುನ್ನೇ ಬದಲಾಯಿಸುತ್ತಿದೆ ಎಂದು ದೇವರಾಜೇಗೌಡ ಹೇಳಿದರು.

ರಾಜ್ಯದಲ್ಲಿ ಈ ಪ್ರಕರಣವನ್ನು ವಕೀಲರ ನೇತೃತ್ವದಲ್ಲಿ ಸಿಬಿಐ ತನಿಖೆಗೆ ಕೊಡುವಂತೆ ಗೃಹ ಸಚಿವರಿಗೆ ಮನವಿ ಕೊಡುತ್ತೇವೆ. ಎ.29ರಂದು ರಾತ್ರಿ ಡಿ.ಕೆ.ಶಿವಕುಮಾರ್ ನನ್ನ ಬಳಿ ಮಾತನಾಡಿದ್ದು, ಈಗ ಹರಿದಾಡುತ್ತಿರುವ ವಿಡಿಯೋಗಳ್ಯಾವುವು ನನ್ನ ಬಳಿ ಇರುವ ಪೆನ್‍ಡ್ರೈವ್‍ನದ್ದಲ್ಲ ಎಂದು ದೇವರಾಜೇಗೌಡ ಸ್ಪಷ್ಟಪಡಿಸಿದರು.

ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಡಿಕೆಶಿ ಆಫರ್: ‘ಪೆನ್‍ಡ್ರೈವ್ ಯಾವ ರೀತಿ ಬೆಂಗಳೂರಿಗೆ ಬಂತು?, ಈ ವಿಚಾರದಲ್ಲಿ ನಾನು ಎಸ್‍ಐಟಿ ಅಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದೇನೆ. ಇನ್ನು ಪೆನ್‍ಡ್ರೈವ್ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ತಮ್ಮ ಪರವಾಗಿ ಸಹಕರಿಸುವಂತೆ ನನಗೆ ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಎಲ್.ಆರ್.ಶಿವರಾಮೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಪ್ರಕರಣದ ವಿಚಾರವಾಗಿ ನನ್ನ ಬಳಿ ಚರ್ಚೆ ನಡೆಸಿದ್ದರು. ಸಂತ್ರಸ್ಥರು ಬಂದು ದೂರು ಕೊಡ್ತಾರಾ?, ಸಂತ್ರಸ್ಥ ಮಹಿಳೆಯರ ಬಗ್ಗೆನೂ ಮಾಹಿತಿ ಬಿಚ್ಚಿಟ್ಟರು. ಪೆನ್‍ಡ್ರೈವ್ ಲೀಕ್ ಮೂಲಕ ಈಗ ಎಚ್.ಡಿ.ದೇವೇಗೌಡ ಅವರನ್ನು ಫಿಕ್ಸ್ ಮಾಡಲು ನೋಡುತ್ತಿದ್ದಾರೆ. ಎಸ್‍ಐಟಿ ಅಧಿಕಾರಿಗಳು ನನಗೆ ನೋಟೀಸ್ ಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲೆ ಮಾಡಿದ ಆರೋಪವನ್ನು ಡಿಲೀಟ್ ಮಾಡುವಂತೆ ಓರ್ವ ಎಸ್‍ಐಟಿ ಮಹಿಳಾ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ’ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News