ಒಬ್ಬರ ಬಳಿಯೇ ಅಪಾರ ಸಂಪತ್ತು ಇರುವುದು ಕೆಟ್ಟ ಅರ್ಥ ವ್ಯವಸ್ಥೆ : ಪರಕಾಲ ಪ್ರಭಾಕರ್

Update: 2024-04-19 16:52 GMT

ಬೆಂಗಳೂರು: ದೇಶದ ಶೇ.1ರಷ್ಟು ಜನರ ಬಳಿ ದೇಶದ ಶೇ.40ರಷ್ಟು ಸಂಪತ್ತಿರುವ ಅತ್ಯಂತ ಕೆಟ್ಟ ಅರ್ಥ ವ್ಯವಸ್ಥೆಯನ್ನು ನಮ್ಮ ದೇಶ ಹೊಂದಿದೆ ಎಂದು ಖ್ಯಾತ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸಂವಿಧಾನದ ಹಾದಿಯಲ್ಲಿ ಸಂಘಟನೆ ಆಯೋಜಿಸಿದ್ದ ’ದೇಶದ ದನಿ’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಶೇ.1ರಷ್ಟು ಜನರ ಬಳಿ ದೇಶದ ಶೇ.40ರಷ್ಟು ಸಂಪತ್ತಿರುವ ಅತ್ಯಂತ ಕೆಟ್ಟ ಅರ್ಥ ವ್ಯವಸ್ಥೆಯನ್ನು ನಮ್ಮ ದೇಶ ಹೊಂದಿದೆ. ದೇಶದಲ್ಲಿ ಅತ್ಯಂತ ಗಂಭೀರ ಪ್ರಮಾಣದಲ್ಲಿ ಅಸಮಾನತೆ ನೆಲೆಯಾಗಿದೆ ಎಂದು ತಿಳಿಸಿದರು.

ಪ್ರತಿ ಮನೆಯ ಉಳಿತಾಯ ಶೇ.5ರಷ್ಟಿದ್ದರೆ ಮನೆ ಸಾಲದ ಪ್ರಮಾಣ ಶೇ.40ರಷ್ಟಿದೆ. ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಯುವ ನಿರುದ್ಯೋಗಿಗಳು ಸೃಷ್ಟಿಯಾಗಿದೆ. ಉದ್ದಿಮೆದಾರರು ದೇಶವನ್ನು ತ್ಯಜಿಸುತ್ತಿದ್ದಾರೆ. ಪ್ರತಿ ವರ್ಷ ಒಂದೂವರೆ ಲಕ್ಷ ಜನ ದೇಶದ ನಾಗರಿಕತ್ವವನ್ನು ತೊರೆಯುತ್ತಿದ್ದಾರೆ. ಅವರು ದೇಶದ ಆರ್ಥಿಕ ಸಮೃದ್ಧಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಹಸಿವಿನ ಪ್ರಮಾಣ ಹೆಚ್ಚಿರುವ ಬಗ್ಗೆ ನಾವು ಆತಂಕ ವ್ಯಕ್ತಪಡಿಸಿದರೆ ನಮ್ಮನ್ನು ಟೀಕಿಸಲಾಗುತ್ತದೆ. ಇದೇ ವೇಳೆ ದೇಶದ 82 ಕೋಟಿ ಜನರಿಗೆ ಪ್ರಧಾನ ಮಂತ್ರಿ ಪಡಿತರ ಯಾಕೆ ಕೊಡುತ್ತಾರೆ? ಆ 82 ಕೋಟಿ ಜನರಿಗೆ ಉದ್ಯೋಗ, ವ್ಯಾಪಾರಗಳಿದ್ದರೆ ಪಡಿತರ ಕೊಡಬೇಕಾದ ಸ್ಥಿತಿ ಇರುತ್ತಿತ್ತೆ ಎಂದು ಪರಕಾಲ ಪ್ರಭಾಕರ್ ಪ್ರಶ್ನಿಸಿದರು.

ಸಾಮಾಜಿಕ ಕಾರ್ಯಕರ್ತ ಅಕಾರ್ ಪಟೇಲ್ ಮಾತನಾಡಿ, ಜೂನ್‍ನಲ್ಲಿ ಯಾರು ಚುನಾವಣೆ ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಪಿಎಂಎಲ್‍ಎ (ಅಕ್ರಮ ಹಣ ವರ್ಗಾವಣೆ ಕಾಯ್ದೆ)ಯ ದುರ್ಬಳಕೆಗೆ ಕಡಿವಾಣ ಹಾಕಬೇಕಿದೆ. ಭಯೋತ್ಪಾದಕರ ಹಣ ವರ್ಗಾವಣೆಗೆ ಸೀಮಿತವಾಗಿದ್ದ ಕಾನೂನು ಬಳಿಕ ಮಾದಕ ವಸ್ತುಗಳ ವ್ಯವಹಾರಕ್ಕೆ ವಿಸ್ತರಣೆಯಾಗಿ ಇದೀಗ ರಾಜಕೀಯ ಪಕ್ಷಗಳ ಚಟುವಟಿಕೆಗೆ ಲಗಾಮು ಹಾಕಲು ಈ ಕಾನೂನು ಬಳಸುವುದು ಸರಿಯಲ್ಲ ಎಂದು ಹೇಳಿದರು.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, 12 ಲಕ್ಷ ಶಿಕ್ಷಕರು ಹುದ್ದೆಗಳು ಖಾಲಿ ಇವೆ. ಸ್ಕಾಲರ್ ಶಿಪ್‍ಗಳನ್ನು ಸ್ಥಗಿತಗೊಳಿಸಲಾಗಿದೆ. ಶಿಕ್ಷಣಕ್ಕೆ ನೀಡುತ್ತಿರುವ ಅನುದಾನದ ಪ್ರಮಾಣ ಕಡಿತವಾಗಿದೆ.ಇನ್ನೊಂದೆಡೆ ಕೇಂದ್ರದ ಬಿಜೆಪಿ ಸರಕಾರವು ಆರ್ ಟಿಇ ಕಾಯ್ದೆಯನ್ನು ದುರ್ಬಲಗೊಳಿಸಿದೆ. 88 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯದ 28 ಸಂಸದರ ಕಾರ್ಯವೈಖರಿಯ ವರದಿಯನ್ನು ಬಿಡುಗಡೆ ಮಾಡಲಾಯಿತು. ಸಾಮಾಜಿಕ ಕಾರ್ಯಕರ್ತ ಸಲೀಲ್ ಶೆಟ್ಟಿ, ಮಾಜಿ ಕುಲಪತಿ ಮಲ್ಲಿಕಾ ಘಂಟಿ, ದಲಿತ ಹೋರಾಟಗಾರ್ತಿ ನಿರ್ಮಲಾ, ಉಪನ್ಯಾಸಕಿ ಜಾನಕಿ ನಾಯರ್ ಸೇರಿದಂತೆ ಪ್ರಮುಖರಿದ್ದರು.

ಮುಸ್ಲಿಮ್ ಪ್ರತಿನಿಧಿಗಳೇ ಇಲ್ಲ: ಆಡಳಿತರೂಢ ಬಿಜೆಪಿಯಿಂದ ಲೋಕಸಭೆ, ರಾಜ್ಯಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದನಿಲ್ಲ. ಸಚಿವನಿಲ್ಲ. ತ್ರಿಪುರದಲ್ಲಿ ಇತ್ತೀಚೆಗಷ್ಟೇ ಒಬ್ಬ ಮುಸ್ಲಿಮ್ ಶಾಸಕ ಬಿಜೆಪಿಯಿಂದ ಆಯ್ಕೆ ಆಗಿದ್ದಾನೆ. ದೇಶದ 20 ಕೋಟಿ ಮುಸ್ಲಿಮರಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ಇಲ್ಲದಿರುವುದು ಸೂಕ್ತವಲ್ಲ ಎಂದು ಅಕಾರ್ ಪಟೇಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News