ʼಫೋನ್ ಟ್ಯಾಪ್ʼ ಮಾಡಲು ಎಚ್‌ಡಿಕೆ, ರೇವಣ್ಣ ಭಯೋತ್ಪಾದಕರೇ? : ಡಿ.ಕೆ.ಶಿವಕುಮಾರ್

Update: 2024-05-20 14:13 GMT

ಬೆಂಗಳೂರು : "ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಅವರೇನು ಭಯೋತ್ಪದಕರೇ?. ಫೋನ್ ಟ್ಯಾಪ್ ನಂತಹ ಮುಠ್ಠಾಳತನದ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಮೊಬೈಲ್ ಕರೆಗಳ ಕದ್ದಾಲಿಕೆ ಬಗ್ಗೆ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, "ಭಯೋತ್ಪಾದಕರ ಫೋನನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದರು.

ನನಗೂ ಪೆನ್ ಡ್ರೈವ್ ಗೂ ಸಂಬಂಧವಿಲ್ಲ :

ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಪಾತ್ರದ ಬಗ್ಗೆ ಆರೋಪ ಮಾಡಿರುವ ಕುರಿತು ಕೇಳಿದಾಗ "ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಹೆಸರನ್ನು ಪ್ರಸ್ತಾಪ ಮಾಡದಿದ್ದರೆ ಅವರಿಗೆಲ್ಲ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಸಹ ಈ ವಿಚಾರದಲ್ಲಿ ನೈತಿಕತೆಯ ಗಡಿ ಮೀರಬಾರದು. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ" ಎಂದರು.

ಯಾರ ಜೊತೆಯೂ ಮಾತನಾಡಿಲ್ಲ:

ಡಿ.ಕೆ.ಶಿವಕುಮಾರ್, ದೇವರಾಜೇಗೌಡ ಮತ್ತು ಶಿವರಾಮೇಗೌಡ ಅವರ ನಡುವಿನ ಸಂಭಾಷಣೆ ಆಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ "ನಾನು ಯಾರ ಜೊತೆಯೂ ಮಾತನಾಡಬಾರದ್ದು ಮಾತನಾಡಿಲ್ಲ. ನಾನೊಬ್ಬ ರಾಜಕಾರಣಿ, ನನ್ನನ್ನು ಭೇಟಿ ಮಾಡಲು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕರ್ತರೂ ಬರುತ್ತಾರೆ. ಅವರು ಬಿಜೆಪಿಯವರು, ನನ್ನ ಭೇಟಿಗೆ ಸಮಯ ಕೇಳಿದ್ದರು. ನಾನು ಕೊಡಲಿಲ್ಲ. ಅರ್ಧ ನಿಮಿಷವೂ ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರ ಪ್ರಜ್ಞೆ ಇದೆ. ಈ ವಿಚಾರದ ಗಂಭೀರತೆಯೂ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News