ಔಷಧ ಉತ್ಪನ್ನವನ್ನು ಬದಲಿಸಲು ʼಪುಷ್ಕರ್ ಫಾರ್ಮಾ ಲಿಮಿಟೆಡ್ʼ ಗೆ ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು : ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಪುಷ್ಕರ್ ಫಾರ್ಮಾ ಲಿಮಿಟೆಡ್ ಕಂಪನಿಯು ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ದ್ರಾವಣ ಉತ್ಪನ್ನದ ಬಗ್ಗೆ ಸೃಷ್ಟಿಯಾಗಿರುವ ಗೊಂದಲಗಳ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಕೆ.ಎಸ್.ಎಂ.ಎಸ್.ಸಿ.ಎಲ್ ಗೋದಾಮುಗಳು ಮತ್ತು ಸಂಸ್ಥೆಗಳಿಂದ ಉತ್ಪನ್ನವನ್ನು ಹಿಂಪಡೆಯಲಾಗುತ್ತಿದೆ. ಔಷಧ ಉತ್ಪನ್ನವನ್ನು ಬದಲಿಸಲು ಪುಷ್ಕರ್ ಫಾರ್ಮಾ ಲಿಮಿಟೆಡ್‌ಗೆ ಸೂಚನೆ ನೀಡಲಾಗಿದೆ.
ಪುಷ್ಕರ್ ಫಾರ್ಮಾ ಕಂಪನಿಯು ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ಉತ್ಪನ್ನದಲ್ಲಿ ದೋಷವಿದೆಯಾ ಎಂಬುದರ ಬಗ್ಗೆ ಪರಿಶೀಲಿಸಲು ಸೂಚನೆ ನೀಡಲಾಗಿತ್ತು. ಔಷಧಿ ಪರಿಶೀಲನೆ ವೇಳೆ ಇದು ಪಶುಗಳಿಗೆ ಬಳಸುವ ಔಷಧವಲ್ಲ. ಔಷಧದ ಮೇಲಿನ ಮುದ್ರಣ ದೋಷವಾಗಿದೆ ಎಂದು ತಿಳಿದು ಬಂದಿದೆ. ಆದರೂ, ಮುಂಜಾಗೃತ ಕ್ರಮವಾಗಿ ದಾಸ್ತಾನಿನಲ್ಲಿರುವ ಔಷಧಿಗಳನ್ನು ವಾಪಸ್ ಕಳಿಸಲು ಸೂಚಿಸಲಾಗಿದೆ.
ಲೇಬಲ್ ಚೇಂಜ್ ಆಗಿರುವ ಬಗ್ಗೆ ಪುಷ್ಕರ್ ಫಾರ್ಮಾ ಸಂಸ್ಥೆಯು ಈ ಮೊದಲೇ ಮಾಹಿತಿ ನೀಡಿದ್ದು, ಆರೋಗ್ಯ ಅಧಿಕಾರಿಗಳು ಕೂಡ ಸೂಕ್ತ ಪರಿಶೀಲನೆ ನಡೆಸಿದ್ದಾರೆ. ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದ ಜನರ ಆರೋಗ್ಯ ವಿಷಯದಲ್ಲಿ ಯಾವುದೇ ಪ್ರಮಾದ ನಡೆಯಲು ನಮ್ಮ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಅರೋಗ್ಯ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.