ನಾನು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ, ಸರಕಾರದ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ: ಎಚ್.ಡಿ ಕುಮಾರಸ್ವಾಮಿ

Update: 2024-01-30 11:05 GMT

ಬೆಂಗಳೂರು: ನಾನು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ. ಸರಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ. ಗಣರಾಜ್ಯ ದಿನ ಕೆರಗೋಡುನಲ್ಲಿ ಗ್ರಾಮಸ್ಥರು ತ್ರಿವರ್ಣ ದ್ವಜ ಹಾರಿಸಿ ಸಂಜೆ ಅದನ್ನು ಇಳಿಸಿದ್ದಾರೆ. ಆ ಗ್ರಾಮದ ಸರಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆಲ್ಲಾ ಶುರು ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಸಚಿವ ಚೆಲುವರಾಯಸ್ವಾಮಿ ಮಾತನಾಡಿದ್ದನ್ನು ನೋಡಿದೆ. ಅವರ ನಯ ವಿನಯ ನಾಜೂಕುತನವನ್ನು ಗಮನಿಸಿದೆ. 'ಅತಿ ವಿನಯಂ ದೂರ್ತ ಲಕ್ಷಣಂ' ಎಂಬಂತೆ ಇತ್ತು ಅವರ ಹಾವಭಾವ ಎಂದು ಲೇವಡಿ ಮಾಡಿದರು.

ಹುಳುಕು ಮುಚ್ಚಿಕೊಳ್ಳಲು ಆರೋಪ

ನಮ್ಮ ಹಳೆಯ ಸ್ನೇಹಿತರು ಕೆಲವು ಸಲಹೆಗಳನ್ನು ಕೊಟ್ಡಿದ್ದಾರೆ. ಮಂಡ್ಯ ಜಿಲ್ಲೆ ಹಾಳು ಮಾಡಲು ನಾನು ಮಂಡ್ಯಕ್ಕೆ ಹೊಗಿದ್ದೆ ಅಂದಿದ್ದಾರೆ. ಮಂಡ್ಯದ ಘಟನೆಗೂ ನನಗೂ ಏನು ಸಂಬಂಧ ಇದೆ ಎನ್ನುವುದು ಆ ಜಿಲ್ಲೆಯ ಜನರಿಗೆ ಗೊತ್ತಿದೆ. ನಿಮ್ಮ ಆಡಳಿತ ವೈಫಲ್ಯ, ನಡವಳಿಕೆ ಕೆರಗೋಡು ಘಟನೆಗೆ ಕಾರಣ. ಆದರೆ, ತಮ್ಮ ಹಾಗೂ ಸರಕಾರದ ಹುಳುಕು ಮುಚ್ಚಿಟ್ಟಿಕೊಳ್ಳಲು ನನ್ನ ಮೇಲೆ ಅರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕೆರಗೋಡು ಗ್ರಾಮದಲ್ಲಿ ಧ್ವಜ  ಇಳಿಸಿದ ಘಟನೆಯ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ಸರಕಾರವೇ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ಒಟ್ಟಿಗೆ ಪ್ರತಿಭಟನೆ ಮಾಡಿವೆ. ಬಿಜೆಪಿ ನಾಯಕರ ಜತೆ ನಾನೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಅಲ್ಲಿ ನಾನು ಏನು ಹೇಳಿದೆ ಎನ್ನುವುದು ಈ ವ್ಯಕ್ತಿಗೆ ಗೊತ್ತಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಮುಖ ಮುಚ್ಚಿಕೊಳ್ಳಲು ನಕಲಿ ದಾಖಲೆ ಸೃಷ್ಟಿ

ಕೆರಗೋಡಿನ ವಿಚಾರ ಹೇಗೆ ಆರಂಭವಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಮೊದಲು ಒಂದು ಪಂಚಾಯಿತಿ ನಿರ್ಣಯದಲ್ಲಿ ದ್ವಜ ಸ್ಥಂಭ ಸ್ಥಾಪಿಸಲು ಅನುಮತಿ ಕೇಳಿರುವ ಬಗ್ಗೆ ಉಲ್ಲೇಖ ಇದೆ. ಗೌರಿಶಂಕರ ಸೇವಾ ಟ್ರಸ್ಟ್ 27 ನವೆಂಬರ್ ನಲ್ಲಿ ಅರ್ಜಿ ಕೊಟ್ಟಿದೆ. ಆಗ ದ್ವಜ ಸ್ಥಂಭಕ್ಕೆ ಡಿ. 29ರಂದು ಅನುಮತಿ ಕೊಟ್ಟಿದ್ದಾರೆ. ಇಲ್ಲಿ ತಿದ್ದುವ ಕೈಚಳಕ ನಡೆದಿದೆ ಎಂದು ಹೇಳಿದರು.

ಅಷ್ಟೇ ಅಲ್ಲ, ಕೆರಗೋಡು ಗ್ರಾಮದಲ್ಲಿ ದ್ವಜ ಸ್ಥಂಭದ ಸ್ಥಳದಲ್ಲಿ ನಾನಾ ಪ್ರತಿಮೆಗಳನ್ನು ನಿರ್ಮಾಣ ಮಾಡಲು, ಬೇರೆ ಬೇರೆ ಸಮಯದಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಅರ್ಜಿಗಳನ್ನು ಕೊಡಿಸಲಾಗಿದೆ. ಇದೆಲ್ಲವೂ ಪೂರ್ವಯೋಜಿತವಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದವರು.

ಸೋಮವಾರ ಸಂಜೆ ಆರು ಗಂಟೆಗೆ ಪಿಡಿಓ ನ ಸಸ್ಪೆಂಡ್ ಮಾಡಲು ಆದೇಶ ಮಾಡಲಾಗಿದೆ. ಆದರೆ, ಶಾಸಕ ಸಸ್ಪೆಂಡ್ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟ ಮೇಲೆ ನಿಮ್ಮ ಸರಕಾರದ ಆದೇಶ ಬಂದಿದೆ. ಇದೆಲ್ಲಾ ಏನು ಸೂಚಿಸುತ್ತದೆ ಎಂದು ಅವರು ಪ್ರಶ್ನಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು, ಮಾಜಿ ಸಚಿವರಾದ ಅಲಕೊಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕರಾದ ಸುರೇಶ್ ಗೌಡ, ರಾಜಾ ವೆಂಕಟಪ್ಪ ನಾಯಕ, ತಿಮ್ಮರಾಯಪ್ಪ, ಹಿರಿಯ ನಾಯಕರಾದ ವೀರಭದ್ರಪ್ಪ ಹಾಲಹರವಿ, ಚಂದ್ರಶೇಖರ್, ದೊಡ್ಡನಗೌಡ ಪಾಟೀಲ್, ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News