ಚುನಾವಣೆಯಲ್ಲಿ ಹಾಸನದ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಸಮಸ್ಯೆ ಆದೀತು ಎಂಬ ಕಾರಣಕ್ಕೆ ಪ್ರಜ್ವಲ್ ಶರಣು: ಪರಮೇಶ್ವರ್

Update: 2024-05-31 07:11 GMT

ಬೆಂಗಳೂರು, ಮೇ 31: ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಫಲಿತಾಂಶ ತನಗೆ ಅನುಕೂಲಕರವಾಗಿ ಬರದೇ ಇದ್ದಲ್ಲಿ ಸಮಸ್ಯೆ ಆದೀತು ಎಂದೆನ್ನಿಸಿದ್ದರಿಂದ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಆಗಿ ಸರಂಡರ್ ಆಗಿದ್ದಾರೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪ್ರಜ್ವಲ್ ಚುನಾವಣೆಯಲ್ಲಿ ಪರಾಜಿತರಾದರೆ ಅವರ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ತನ್ನಿಂತಾನೇ ರದ್ದಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರಿಗೆ ವಾಪಸ್ಸು ಬಾರದೆ ಬೇರೆ ದಾರಿಯಿರಲಿಲ್ಲ ಎಂದು ಹೇಳಿದರು.

ಪ್ರಜ್ವಲ್ ವಿದೇಶದ್ಲಲಿದ್ದಾಗ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಕಳಿಸಿ ಅವರನ್ನು ವಶಕ್ಕೆ ಪಡೆದು ವಾಪಸ್ ಕರೆತರುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಅಂಥ ನಡೆಗೆ ಅದರದ್ದೇ ಆದ ಪ್ರಕ್ರಿಯೆಗಳಿರುತ್ತವೆ. ಬೇರೆ ರಾಷ್ಟ್ರಗಳೊಂದಿಗೆ ನಾವು ಮಾಡಿಕೊಂಡಿರುವ ಒಪ್ಪಂದಗಳನ್ನು ಮಾನ್ಯ ಮಾಡಬೇಕಾಗುತ್ತದೆ ಎಂದು ಪರಮೇಶ್ವರ್ ವಿವರಿಸಿದರು.

ಅರೋಪಿಯೊಬ್ಬ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ ಸಿಬಿಐ ಮೂಲಕ ಇಂಟರ್ ಪೋಲ್ ಗೆ ಮಾಹಿತಿ ರವಾನಿಸಿ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿಸಬೇಕಾಗುತ್ತದೆ. ಅಂತಹ ಕ್ರಮಗಳನ್ನು ಮಾಡಲಾಗಿತ್ತು. ಈ ನಡುವೆ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಫಲಿತಾಂಶ ಅವರಿಗೆ ಪ್ರತಿಕೂಲವಾಗಿ ಬಂದರೆ ಅನಾನುಕೂಲವಾಗುವುದರಿಂದ ಪ್ರಜ್ವಲ್ ವಾಪಸ್ಸಾಗಿದ್ದಾರೆ. ಇದರಿಂದ ಅವರ ವಿರುದ್ಧದ ಲೈಂಗಿಕ ಹಗರಣದ ತನಿಖೆ ನಡೆಸುತ್ತಿರುವ ಸಿಟ್ ಗೆ ಅನುಕೂಲವಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News