ಅಕ್ರಮ-ಸಕ್ರಮ ಕಾಯ್ದೆ ಸುಪ್ರೀಂ ತಿರಸ್ಕರಿಸುವ ಸಾಧ್ಯತೆ: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು: ನಿಯಮ ಉಲ್ಲಂಘಿಸಿದ ಅನಧಿಕೃತ ನಿರ್ಮಾಣಗಳನ್ನು ಸಕ್ರಮೀಕರಣಗೊಳಿಸಲು ವಿಶೇಷವಾಗಿ ರೂಪಿಸಲಾಗಿದ್ದ ಅಕ್ರಮ-ಸಕ್ರಮ ಕಾಯ್ದೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಯಶ್ ಪಾಲ್ ಸುವರ್ಣ ಪ್ರಶ್ನೆಗೆ ಉತ್ತರಿಸಿದ ಅವರು, 2016, 2018, 2019, 2021, 2022 ರ ಮಾರ್ಚ್ 31 ರೊಳಗೆ 5 ಬಾರಿ ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಮಾಹಿತಿ ಕೊರತೆ ಎಂದು ಹಲವು ಬಾರಿ ಕಾಲಾವಕಾಶ ನೀಡಿದ್ದೇವೆ. ನ್ಯಾಯಾಲಯಗಳು ಒಂದು ಬಾರಿ ಇನ್ನೊಂದು ಬಾರಿ ಎಂದು ಎಷ್ಟು ಬಾರಿ ಕಾಲಾವಕಾಶ ನೀಡುತ್ತೀರ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಕಾಲಾವಕಾಶ ನೀಡುವ ಮೂಲಕ ಅಕ್ರಮಗಳನ್ನು ಸಕ್ರಮಗೊಳಿಸಲಾಗುತ್ತಿದೆ ಎಂಬ ಆಕ್ಷೇಪವು ನ್ಯಾಯಾಲಯದಿಂದ ಬಂದಿದೆ. ವಕೀಲರು ನನಗೆ ನೀಡಿರುವ ಮಾಹಿತಿ ಪ್ರಕಾರ, ಸುಪ್ರೀಂಕೋರ್ಟ್ ತಡೆ ನೀಡಿದ್ದ ಅಕ್ರಮ-ಸಕ್ರಮ ಕಾಯ್ದೆ ವಿಚಾರಣೆ ಮಹತ್ವದ ಘಟ್ಟ ತಲುಪಿದೆ. ಬಹುತೇಕ ಕಾಯ್ದೆಯ ಔಚಿತ್ಯ ತಿರಸ್ಕಾರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.