ಸಿನಿಮಾ ಕ್ಷೇತ್ರದ ಜತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲೂ ʼಜಿಎಎಫ್ಎಕ್ಸ್ʼ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಯಾಗಬೇಕು: ಡಿ.ಕೆ. ಶಿವಕುಮಾರ್

Update: 2024-01-29 10:49 GMT

Photo: X/@DKShivakumar

ಬೆಂಗಳೂರು: “ಜಿಎಎಫ್ಎಕ್ಸ್ ತಂತ್ರಜ್ಞಾನಗಳಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

5ನೇ ಆವೃತ್ತಿಯ ʼಜಿಎಎಫ್ಎಕ್ಸ್ʼ  ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಮ್ಮ ಬೆಂಗಳೂರಿನಲ್ಲಿ ಪ್ರತಿ ಮೂರ್ನಾಲ್ಕು ಕುಟುಂಬದಲ್ಲಿ ಒಬ್ಬ ಟೆಕ್ಕಿ ಇದ್ದೇ ಇರುತ್ತಾನೆ. ಬೆಂಗಳೂರಿನಲ್ಲಿ  ಸುಮಾರು 400ಕ್ಕೂ ಹೆಚ್ಚು ಸಂಸ್ಥೆಗಳಿದ್ದು, ತಂತ್ರಜ್ಞಾನವಿಲ್ಲದೆ ಶಿಕ್ಷಣ ಅಸಾಧ್ಯ ಎಂಬಂತಹ ಪರಿಸ್ಥಿತಿಗೆ ಬಂದಿದ್ದೇವೆ. ತಂತ್ರಜ್ಞಾನವಿಲ್ಲದ ಕ್ಷೇತ್ರವೇ ಇಲ್ಲ. ನೀವು ತಂತ್ರಜ್ಞಾನಗಳಿಂದ ಎಲ್ಲೇ ತಪ್ಪಿಸಿಕೊಂಡರು ಚಿತ್ರಮಂದಿರಗಳಲ್ಲಿ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಅಳವಡಿಕೆ ಬಹಳ ಅಚ್ಚರಿಯಾಗುತ್ತದೆ. ಬೆಂಗಳೂರು ಗೇಮಿಂಗ್, ಅನಿಮೇಷನ್, ಸಿನಿಮಾ ಇತರೆ ಮನರಂಜನಾ ಕ್ಷೇತ್ರಗಳ ತಂತ್ರಜ್ಞಾನ(ಜಿಎಎಫ್ಎಕ್ಸ್)ದಲ್ಲಿ ದಾಪುಗಾಲಿಡುತ್ತಿದೆ. ನಾವು ಜಾಗತಿಕವಾಗಿ ಸ್ಪರ್ಧೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ʼಜಿಎಎಫ್ಎಕ್ಸ್ʼ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಅತ್ಯುತ್ತಮ ಚಿತ್ರಗಳನ್ನು ತಯಾರಿಸುವ ಭರವಸೆಯಿದೆ.

ಈಗ ಕೃತಕ ಬುದ್ಧಿಮತ್ತೆ ಆಗಮನದಿಂದಾಗಿ ಈ ಕ್ಷೇತ್ರಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಈ ತಂತ್ರಜ್ಞಾನಗಳು ನಮ್ಮ ಮಕ್ಕಳ ಬದುಕಿನಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತಂದಿವೆ. ಈ ಉದ್ಯಮ ಮತ್ತಷ್ಟು ಬೆಳೆಯಲು ಸರ್ಕಾರ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಬೆಂಗಳೂರು ಅಯಸ್ಕಾಂತದಂತೆ ವೇಗವಾಗಿ ಸೆಳೆದುಕೊಳ್ಳುತ್ತದೆ ಎಂದು ಹೇಳಿದರು.

ಕೈಗಾರಿಕಾ ಕ್ರಾಂತಿಗೆ ಬೆಂಗಳೂರು ಸ್ಪಂದಿಸಿದೆ:

ದೇಶದಲ್ಲಿ 1950, 60, 70ರ ದಶಕದಲ್ಲಿ ಸಾರ್ವಜನಿಕ ಉದ್ದಿಮೆಗಳ ಕ್ರಾಂತಿಯಾಯಿತು. ಈ ಸಂದರ್ಭದಲ್ಲಿ ನಮ್ಮ ನಾಯಕರಾದ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಬೆಂಗಳೂರಿನಲ್ಲಿ ಅನೇಕ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಿದರು. ಬಿಇಎಲ್, ಬೆಮೆಲ್, ಇಸ್ರೋ, ಬಿಎಚ್ಇಎಲ್ ಸೇರಿದಂತೆ ಅನೇಕ ಉದ್ದಿಮೆ ಆರಂಭಿಸಿದರು.

ನಂತರ ನಡೆದ ಕೈಗಾರಿಕಾ ಕ್ರಾಂತಿ ಸಂದರ್ಭದಲ್ಲಿ ಬೆಂಗಳೂರು ಅನೇಕ ಕೈಗಾರಿಕ ಪ್ರದೇಶಗಳನ್ನು ಸ್ಥಾಪಿಸಿ ಸಕಾರಾತ್ಮಕವಾಗಿ ಸ್ಪಂದಿಸಿತು. ಕೈಗಾರಿಕೆಗಳನ್ನು ಬೆಂಗಳೂರು ಬಹಳ ಆತ್ಮೀಯವಾಗಿ ಅಪ್ಪಿಕೊಳ್ಳುತ್ತದೆ. ಕೈಗಾರಿಕೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ನಮ್ಮ ಸರ್ಕಾರ ಐಟಿ ಕ್ಷೇತ್ರೆಕ್ಕೆ ಆದ್ಯತೆ ನೀಡಿದ ಪರಿಣಾಮ ಐಟಿ ಕ್ಷೇತ್ರ ಬೆಂಗಳೂರಿನಲ್ಲಿ ಬೆಳೆಯಿತು.

ತಂತ್ರಜ್ಞಾನ ಉದ್ಯಮಕ್ಕೆ ನೂತನ ನೀತಿ ಅಳವಡಿಕೆ:

ಮನರಂಜನಾ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದೆ. ಹಾಲಿವುಡ್ ಹಾಗೂ ಟಿವಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಪ್ರತ್ಯೇಕ ನೀತಿಗಳನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ನಾವು ಕೂಡ ಈ ವಿಚಾರದಲ್ಲಿ ನೂತನ ನೀತಿ ರೂಪಿಸಿಕೊಳ್ಳಬೇಕಿದೆ. ನೂತನ ನೀತಿ ಕೈಗಾರಿಕಾ ಸ್ನೇಹಿತವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಣೆಗೆ ಸಹಕಾರಿಯಾಗಿದೆ ಎಂದರು.

ಈ ಉದ್ಯಮ ಪ್ರತಿ ಒಂದೆರಡು ವರ್ಷಗಳಲ್ಲಿ ಬದಲಾವಣೆಯನ್ನು ಕಾಣುತ್ತಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಉದ್ಯಮಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಲು, ಅವುಗಳನ್ನು ಬಲಪಡಿಸಲು ಸರ್ಕಾರ ಸಂಪೂರ್ಣ ಸಹಕಾರ ನೀಡುವುದು. ಈ ಉದ್ಯಮದ ಅಭಿವೃದ್ಧಿಗೆ ಕರ್ನಾಟಕ ಬದ್ಧವಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News