ಮೊದಲ ಹಂತದ 100 ನೂತನ ಬಿಎಂಟಿಸಿ ಬಸ್‌ಗಳ ಲೋಕಾರ್ಪಣೆ

Update: 2024-09-12 07:27 GMT

ಬೆಂಗಳೂರು : ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ ಬಿಎಂಟಿಸಿ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ‌ ಬಸ್‌ಗಳು ಬಿಎಂಟಿಸಿಗೆ ಸೇರಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ ಬಿಎಂಟಿಸಿ ಬಸ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ‌ ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸುತ್ತಿದ್ದೇವೆ. ಜೊತೆಗೆ ಹಿಂದಿನ ಸರಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿ, ನೂತನವಾಗಿ ಇನ್ನಷ್ಟು ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ ಎಂದರು.

ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಅವರು ತಿಳಿಸಿದರು.

ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ ಎಂದರು.

ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸುತ್ತಿವೆ. ನಾವು ಬಡವರಿಗೆ ಅಕ್ಕಿ ಕೊಡುವ ಯೋಜನೆಗೆ ಮುಂದಾದರೆ ಕೇಂದ್ರ ಸರಕಾರ ನಮಗೆ ಅಕ್ಕಿ ಕೊಡದೆ ತೊಂದರೆ ನೀಡಿತು. ಆದರೆ ನಾವು ಅಕ್ಕಿಯ ಬದಲಿಗೆ, ಅಕ್ಕಿಯ ಹಣವನ್ನು ಜನರಿಗೆ ನೀಡಿ ನುಡಿದಂತೆ ನಡೆದಿದ್ದೇವೆ ಎಂದರು.‌

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಝಮೀರ್ ಅಹ್ಮದ್, ಇಂಧನ ಸಚಿನ ಕೆ.ಜೆ.ಜಾರ್ಜ್, ಕೆಕೆಆರ್ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News