ರಾಮ ಮಂದಿರದ ಉದ್ಘಾಟನೆ: ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ
ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ಜ.22ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇತ್ತೀಚೆಗೆ ಡಿಜಿಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ರಾಜ್ಯದಲ್ಲಿ ಕೋಮುಗಲಭೆಯಂತಹ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಸೂಚಿಸಿದ್ದರು.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಡಿಸಿಪಿಗಳೊಂದಿಗೆ ಸಭೆ ನಡೆಸಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಿರದಂತೆ ನಗರ ಪೊಲೀಸರು ಜ.22ರಂದು ತುರ್ತು ರಜೆ ಹೊರತುಪಡಿಸಿ ಯಾರೂ ವಾರದ ರಜೆ ಹಾಗೂ ಸಾಂದರ್ಭಿಕ ರಜೆ ಪಡೆಯಕೂಡದು. ಮೇಲಾಧಿಕಾರಿಗಳು ರಜೆಗೆ ಅನುಮತಿ ನೀಡಕೂಡದು ಎಂದು ಸೂಚನೆ ನೀಡಿದ್ದಾರೆ.
ಜ.22ರಂದು ನಗರದಲ್ಲಿ ಯಾವುದೇ ರ್ಯಾಲಿ, ಪ್ರತಿಭಟನೆ, ಮೆರವಣಿಗೆಗೆ ಅನುಮತಿ ನೀಡಕೂಡದು. ಆಯಾ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸಬೇಕು. ಹೆಚ್ಚಿನ ಭದ್ರತೆಗಾಗಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.