ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ದೇಶದ್ರೋಹವೇ?: ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು: ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ಧ್ವನಿಯೆತ್ತುವುದಕ್ಕೆ ಮೋದಿಯವರು ದೇಶದ್ರೋಹದ ಹೊಸ ವ್ಯಾಖ್ಯಾನ ಬರೆಯಲು ಹೊರಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಈ ಸಂಬಂಧ ʼಎಕ್ಸ್ʼ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬುದು ದೇಶ ವಿಭಜನೆಯ ಭಾಷೆ ಎಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಅಂದರೆ ಕೇಂದ್ರ ಎಷ್ಟೇ ಅನ್ಯಾಯ ಮಾಡಿದರೂ ರಾಜ್ಯ ಬಿಜೆಪಿ ಕೂಡ ತೆಪ್ಪಗಿರಬೇಕು ಎಂದು ಮೋದಿ ಬಯಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ಧ್ವನಿಯೆತ್ತುವುದಕ್ಕೆ ಮೋದಿಯವರು ದೇಶದ್ರೋಹದ ಹೊಸ ವ್ಯಾಖ್ಯಾನ ಬರೆಯಲು ಹೊರಟಿದ್ದಾರೆ. ಮೋದಿಯವರೆ, ನಿಮ್ಮ ಈ ಕಲ್ಪಿತ ನರೆಟೀವ್‍ಗಳು ಆ ಕ್ಷಣಕ್ಕೆ ನಿಮ್ಮ ಮನಸ್ಸಿಗೆ ಖುಷಿ ಕೊಡಬಹುದಷ್ಟೇ. ಇಂತಹ ಹೇಳಿಕೆಗಳಿಂದ ನಮ್ಮ ರಾಜ್ಯಕ್ಕೆ ನೀವು ಎಸಗಿರುವ ಅನ್ಯಾಯದ ಪಾಪ ಕಿಂಚಿತ್ತೂ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲಿಗಾಗಿ ಪ್ರತಿಭಟಿಸಿದ ಮಾತ್ರಕ್ಕೆ ನಾವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಿದ್ದೇವೆ ಎಂದು ಬಿಂಬಿಸುವುದೇ ಮಹಾಪರಾಧ. ಕರ್ನಾಟಕದ ಅಸ್ಮಿತೆಯ ಪರವಾಗಿ ನಮ್ಮ ಧ್ವನಿ ಎಷ್ಟು ಗಟ್ಟಿಯಾಗಿದೆಯೋ ಭಾರತದ ಅಖಂಡತೆಯ ವಿಚಾರದಲ್ಲೂ ನಮ್ಮ ಧ್ವನಿ ಅಷ್ಟೇ ಗಟ್ಟಿಯಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಧರ್ಮದ ಆಧಾರದಲ್ಲಿ ಈ ದೇಶವನ್ನು ಒಡೆಯುತ್ತಿರುವ ಮೋದಿ ಮತ್ತು ಅವರ ಪಕ್ಷದವರು ಒಕ್ಕೂಟ ವ್ಯವಸ್ಥೆಗೆ ಮೊದಲು ಗೌರವಿಸುವುದನ್ನು ಕಲಿಯಲಿ. ಆಮೇಲೆ ನಮಗೆ ಬೋಧನೆ ಮಾಡಲಿ ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.