ನಾಳೆ 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ಪ್ರದಾನ: ಈಶ್ವರ್ ಖಂಡ್ರೆ

Update: 2024-09-02 16:09 GMT

ಬೆಂಗಳೂರು : ಅರಣ್ಯ ಇಲಾಖೆಗೆ ಹೊಸದಾಗಿ ಆಯ್ಕೆಯಾಗಿರುವ 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ಹಾಗೂ ಗಣನೀಯ ಸೇವೆ ಸಲ್ಲಿಸಿದ 49 ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕವನ್ನು ಸೆ.3ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, 2023-24ನೇ ಸಾಲಿನಲ್ಲಿ 310 ಅರಣ್ಯ ವೀಕ್ಷಕರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು. ಒಟ್ಟು 1,94,007 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಸೆಸೆಲ್ಸಿ ಮತ್ತು ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅತಿ ಹೆಚ್ಚು ಅಂಕ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಪಾರದರ್ಶಕವಾಗಿ 267 ಅರ್ಹ ಅಭ್ಯರ್ಥಿಗಳು ಎಲ್ಲ ವೃತ್ತದಿಂದ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಮತ್ತು ಚಿಕ್ಕಮಗಳೂರು ವೃತ್ತದಲ್ಲಿ ಸ್ಥಳೀಯ ಮೂಲ ಆದಿವಾಸಿ ಜನಾಂಗದ ಅಭ್ಯರ್ಥಿಗಳಿಗೆ ಮೀಸಲಾತಿ ಇದ್ದು, ಈ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸದ ಕಾರಣ ಮತ್ತು ಇನ್ನಿತರ ತಾಂತ್ರಿಕ ಕಾರಣಗಳಿಂದ 43 ಹುದ್ದೆಗಳಿಗೆ ಸದ್ಯಕ್ಕೆ ನೇಮಕಾತಿ ಪತ್ರ ನೀಡಲಾಗುತ್ತಿಲ್ಲ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

2022-23ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ: ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಕೃಷಿ, ಅರಣ್ಯ ನಿರ್ವಹಣೆ, ತರಬೇತಿ, ಸಂಶೋಧನೆ, ಕಾರ್ಯಯೋಜನೆ, ಜನರ ಪಾಲ್ಗೊಳ್ಳುವಿಕೆ, ಅಭಿವೃದ್ಧಿ ಕಾರ್ಯ, ಮಾನವ- ಪ್ರಾಣಿ ಸಂಘರ್ಷ ನಿಯಂತ್ರಣ, ನಾವೀನ್ಯಪೂರ್ಣ ಉಪಕ್ರಮ ಅಳವಡಿಕೆ ಇತ್ಯಾದಿ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ 49 ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News