ಎಸೆಸೆಲ್ಸಿ ಮಕ್ಕಳಿಂದ ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕ ವಸೂಲಿ ಮಾಡಲು ಮುಂದಾಗಿರುವುದು ಖಂಡನೀಯ: ನಿರಂಜನಾರಾಧ್ಯ ವಿ.ಪಿ
ಬೆಂಗಳೂರು: ಶೋಷಿತ ವರ್ಗಕ್ಕೆ ಹಲವು ಗ್ಯಾರಂಟಿಗಳನ್ನು ಮತ್ತು ನಿರುದ್ಯೋಗಿ ಯುವ ಜನತೆಗೆ ಯುವನಿಧಿ ನೀಡಿದ ಸರ್ಕಾರ , ಎಸೆಸೆಲ್ಸಿ ಮಕ್ಕಳಿಂದ ದ ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕ ವಸೂಲಿ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಹೇಳಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಎಸೆಸೆಲ್ಸಿ ಪರೀಕ್ಷೆ ಬರೆಯುವ ಬಡ ಮಕ್ಕಳಿಂದ ಪೂರ್ವ ಸಿದ್ಧತಾ ಪರೀಕ್ಷೆಗೆ ರೂ. 50 ಶುಲ್ಕ ವಸೂಲಿ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳಿಗೆ ಕನಿಷ್ಠ 10 ನೇ ತರಗತಿಯವರೆಗಾದರು ಉಚಿತ ಕಡ್ಡಾಯ ಶಿಕ್ಷಣ ಒದಗಿಸುವ ಜವಾಬ್ದಾರಿ ಹೊಂದಿರುವ ಸರ್ಕಾರ , ಬಡ ಮಕ್ಕಳಿಂದ 50 ರೂ ವಸೂಲಿ ಮಾಡುವ ಸ್ಥಿತಿ ತಲುಪಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶೋಷಿತರ ಪರವಾಗಿರುವ ಸನ್ಮಾನ್ಯ ಸಿದ್ದರಾಮಯ್ಯನವರು ಕೂಡಲೇ ಮಧ್ಯ ಪ್ರವೇಶಿಸಿ ಸುತ್ತೋಲೆಯನ್ನು ತಕ್ಷಣ ಹಿಂದಕ್ಕೆ ಪಡೆಯಲು ಸಂಬಂಧಿಸಿದ ಸಚಿವರಿಗೆ ಹಾಗು ಅಧಿಕಾರಿಗಳಿಗೆ ನಿರ್ದೇಶನ ನೀಡಬೆಕೆಂದು ಒತ್ತಾಯಿಸುತ್ತೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.