ರಾಜ್ಯದಿಂದ 300 ಮೆ.ವ್ಯಾ. ಸೌರ ವಿದ್ಯುತ್ ಖರೀದಿಗೆ ಜೆಎಸ್ ಡಬ್ಲ್ಯು ಸಹಿ: ಕೆ.ಜೆ. ಜಾರ್ಜ್
ಬೆಂಗಳೂರು: ಪಾವಗಡದ ಸೋಲಾರ್ ಪಾರ್ಕ್ನಲ್ಲಿ 300 ಮೆ.ವ್ಯಾ ಸೌರ ಯೋಜನೆ ಸಂಬಂಧ ವಿದ್ಯುತ್ ಸರಬರಾಜು ಕಂಪನಿ ನಿಯಮಿತದೊಂದಿಗೆ ಜೆಎಸ್ ಡಬ್ಲ್ಯು ಎನರ್ಜಿಯ ಅಂಗಸಂಸ್ಥೆಯಾದ ಜೆಎಸ್ ಡಬ್ಲ್ಯು ರಿನ್ಯೂ ಎನರ್ಜಿಯ ಟ್ವೆಂಟಿ ಲಿಮಿಟೆಡ್ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ಇಂಧನ ಸಚಿವ ಕೆ.ಜೆ,ಜಾರ್ಜ್ ತಿಳಿಸಿದ್ದಾರೆ.
ಸೌರ ವಿದ್ಯುತ್ ಖರೀದಿ ಒಪ್ಪಂದ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಕೆ.ಜೆ. ಜಾರ್ಜ್, "ಇಂಧನ ಸಂರಕ್ಷಣೆ, ಸ್ವಚ್ಛ ಮತ್ತು ಹಸಿರು ಇಂಧನ ಉಪಕ್ರಮಗಳಿಗೆ ಒತ್ತು ನೀಡಿರುವುದರಿಂದ ಹಸಿರು ಇಂಧನ ವಲಯದಲ್ಲಿ ರಾಜ್ಯ ದೊಡ್ಡ ಪ್ರಮಾಣದ ಹೂಡಿಕೆ ಆಕರ್ಷಿಸುತ್ತಿದೆ,"ಎಂದು ತಿಳಿಸಿದ್ದಾರೆ.
"2044ರ ಹಣಕಾಸು ವರ್ಷದವರೆಗೆ ಪ್ರತಿ ಕಿ.ವ್ಯಾ.ಎಚ್.ಗೆ 2.89 ರೂ.ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಿದ್ದು, ಯೋಜನೆಯು 18 ತಿಂಗಳೊಳಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತವು 2024ರ ಜುಲೈ 22ರಂದು ಒಪ್ಪಿಗೆ ಪತ್ರ ನೀಡಿತ್ತು. ನಂತರ ಈ ವಿದ್ಯುತ್ ಖರೀದಿ ಒಪ್ಪಿಗೆ ಏರ್ಪಟ್ಟಿದೆ,"ಎಂದು ಹೇಳಿದ್ದಾರೆ.
"ನವೀಕರಿಸಬಹುದಾದ ಇಂಧನ ನೀತಿಯನ್ನು 2009ರಲ್ಲೇ ಅಧಿಸೂಚಿಸಿದ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕ. ವಿದ್ಯುತ್ ಉತ್ಪಾದನಾ ವಲಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುವತ್ತ ರಾಜ್ಯ ಸರ್ಕಾರ ಗಮನಹರಿಸಿದ್ದು, ಇದರಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ನವೀಕರಿಸಬಹುದಾದದ ಇಂಧನ ನೀತಿಯ ಫಲ ಈಗ ಕಾಣುತ್ತಿದ್ದೇವೆ,"ಎಂದಿದ್ದಾರೆ.
"ವಿದ್ಯುತ್ ಉತ್ಪಾದನಾ ವಲಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುವತ್ತ ರಾಜ್ಯ ಸರ್ಕಾರ ಗಮನಹರಿಸಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸವಾಲುಗಳನ್ನು ಎದುರಿಸುವಲ್ಲಿ ಇಂಧನ ಸಂರಕ್ಷಣೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾಂಪ್ರದಾಯಿಕ ಇಂಧನ ಮೂಲಗಳಿಗಿಂತ ನವೀಕರಿಸಬಹುದಾದ ಇಂಧನ ಕಡಿಮೆ ಖರ್ಚಿನ ಪರ್ಯಾಯ ಇಂಧನ ಮೂಲವಾಗಿದೆ,"ಎಂದು ತಿಳಿಸಿದ್ದಾರೆ.