ಕರ್ನಾಟಕ ಪ್ರಗತಿ ಇಲ್ಲದೆ ಸೊರಗುತ್ತಿದೆ : ಆರ್.ಅಶೋಕ್
ಬೆಂಗಳೂರು: ‘ಕಾಂಗ್ರೆಸ್ ನಾಯಕರ ಸ್ವಾರ್ಥ ರಾಜಕಾರಣ, ದೂರದೃಷ್ಟಿ ಇಲ್ಲದ ದುರಾಡಳಿತದಿಂದ ಕರ್ನಾಟಕ ರಾಜ್ಯದ ಪ್ರಗತಿ ಇಲ್ಲದೆ ಸೊರಗುತ್ತಿದೆ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಸರಕಾರ ಇಲ್ಲದೆ ಕನ್ನಡಿಗರು ಅಸಹಾಯಕರಾಗಿದ್ದಾರೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಗ್ಯಾರೆಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ನಿಜವಾದ ಬದ್ಧತೆ ಏನು, ಗ್ಯಾರೆಂಟಿ ಯೋಜನೆಗಳ ಹಿಂದಿರುವ ನಿಜವಾದ ಉದ್ದೇಶ ಏನು ಎನ್ನುವುದನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬಹಿರಂಗ ಪಡಿಸಿದ್ದಾರೆ. ‘ಗ್ಯಾರಂಟಿ ಕೊಟ್ರೆ ಎಲ್ಲ ದಿವಾಳಿ ಎದ್ದೋಗುತ್ತೆ. ‘ರಸ್ತೆ ಮೇಲೆ ಒಂದು ಬುಟ್ಟಿ ಮಣ್ಣ್ ಹಾಕೋಕು ಇಲ್ಲ’ ಎಂದು ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗಿದೆ ಎಂದು ಒಪಿಕೊಳ್ಳುತ್ತಲೇ ಖರ್ಗೆ ಸಾಹೇಬರು, ನೀವು ಇಲ್ಲಿ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಮಾತಾಡಿದರೆ ಮಹಾರಾಷ್ಟ್ರ ಚುನಾವಣೆಯಲ್ಲಿ ಜನರಿಗೆ ಏನು ಸಂದೇಶ ಹೋಗುತ್ತದೆ ಎನ್ನುವ ದಾಟಿಯಲ್ಲಿ ಗುಡುಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
‘ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯನವರಿಗೆ ಹೇಗಾದರೂ ಮಾಡಿ ಆದಷ್ಟು ದಿನ ಕುರ್ಚಿಗೆ ಅಂಟಿಕೊಂಡಿರುವ ಯೋಚನೆ, ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಮುಂದೆ ಕುರ್ಚಿ ಏರುವ ಯೋಚನೆ, ಖರ್ಗೆ ಸಾಹೇಬರಿಗೆ ಪರ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ, ಗಾಂಧಿ ಪರಿವಾರದ ನಿಷ್ಠೆ ಉಳಿಸಿಕೊಳ್ಳುವ ಯೋಚನೆ’ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.