ಕೆಎಎಸ್ ಪರೀಕ್ಷೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೂರು ದಿನದೊಳಗೆ ಮಾಹಿತಿ ನೀಡಲು ಸೂಚನೆ
ಬೆಂಗಳೂರು: ಕೆಪಿಎಸ್ಸಿ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ (ಕೆಎಎಸ್) ಮಂಗಳವಾರಂದು(ಆ.27) ನಡೆಸಿದ್ದು, ಪ್ರಶ್ನೆಪತ್ರಿಕೆಗಳ ಗೊಂದಲದ ಪ್ರಕರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಮೂರು ದಿನದೊಳಗೆ ಪ್ರಾಧಿಕಾರಕ್ಕೆ ವರದಿಯನ್ನು ನೀಡಬೇಕು ಎಂದು ತಿಳಿಸಿದೆ.
ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕೆಪಿಎಸ್ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಆ.27ರಂದು ನಡೆಸಿದ ಪರೀಕ್ಷೆಗಳು, ಉಂಟಾದ ಪ್ರಮಾದ, ಅದರ ಕಾರಣಗಳು ಹಾಗೂ ಇದಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನದೊಳಗಾಗಿ ಪ್ರಾಧಿಕಾರಕ್ಕೆ ನೀಡಬೇಕು ಎಂದಿದ್ದಾರೆ.
ಒಂದು ಕಾಲದಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದ ಕೆಪಿಎಸ್ಸಿ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಇಂದು ತೀರಾ ಕಳಪೆಯಾಗಿರುವುದು ದುರದೃಷ್ಟಕರ. ಅರ್ಥವಾಗದ ಕನ್ನಡ ಬಳಕೆಯಿಂದಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನಾನುಕೂಲವಾಗಿದೆ. ಸಂಕೀರ್ಣ ಮತ್ತು ಗೊಂದಲ ಮೂಡಿಸುವಂತಹ ಪ್ರಶ್ನೆಪತ್ರಿಕೆಗಳಿಂದ ಕನ್ನಡಿಗರೇ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕನ್ನಡದಲ್ಲಿ ಪ್ರಶ್ನೆಗಳನ್ನು ಸಿದ್ಧಪಡಿಸಿ, ಆನಂತರ ಇಂಗ್ಲಿಷಿಗೆ ಅನುವಾದ ಮಾಡಿಸಬೇಕಾಗಿದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾದ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಂಡು ಅಭ್ಯರ್ಥಿಗಳು ಉತ್ತರ ಬರೆಯುವಂತೆ ಸೂಚಿಸಿರುವುದನ್ನು ಪ್ರಾಧಿಕಾರ ಖಂಡಿಸುತ್ತದೆ. ಕೆಪಿಎಸ್ಸಿ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ಅಸಾಧ್ಯವಾದರೆ, ಕೇಂದ್ರ ಸರಕಾರ ಮಾಡುತ್ತಿರುವಂತೆ ಅದನ್ನು ಸಮರ್ಥರಾದವರಿಗೆ ಹೊರಗುತ್ತಿಗೆ ನೀಡಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.