ಅಧಿಕಾರಿಗಳು ನೆಪ ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು : ಸಚಿವ ಕೆ.ಎಚ್.ಮುನಿಯಪ್ಪ

Update: 2024-07-05 15:07 GMT

ಬೆಂಗಳೂರು : ಅಧಿಕಾರಿಗಳು ನೆಪಗಳನ್ನು ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾರೂ ಒಂದಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತ್ರೈಮಾನಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಅವರು, ಕರ್ತವ್ಯದಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಮತ್ತು ಮೇವಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಗಳ ನಿರ್ಮಾಣದ ಕಾರ್ಯ ಶೀಘ್ರವಾಗಿ ಮುಗಿಯಬೇಕು ಎಂದು ಮುನಿಯಪ್ಪ ತಿಳಿಸಿದರು.

ರಸ್ತೆಗಳ ನಿರ್ಮಾಣದಲ್ಲಿ 50 ವರ್ಷಗಳ ದೂರದೃಷ್ಟಿಯಲ್ಲಿ ಸರಿಯಾದ ಯೋಜನೆ ರೂಪಿಸಿ ನಿರ್ಮಿಸಬೇಕಾಗುತ್ತದೆ. ತರಾತುರಿಯಲ್ಲಿ ನಿರ್ಮಾಣ ಮಾಡಬಾರದು. ರಸ್ತೆಗಳ ನಿರ್ಮಾಣದಲ್ಲಿ ಬಹಳ ಗುಣಮಟ್ಟ ಹಾಗೂ ಇನ್ನಿತರೆ ಸ್ಥಳಗಳಿಗೆ ಸಂಪರ್ಕವಾಗುವ ರೀತಿಯಲ್ಲಿ ಕ್ರಿಯಾ ಯೋಜನೆ ಮಾಡಿ ನನ್ನ ಗಮನಕ್ಕೆ ತಂದು ಜಾರಿಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಹೊಸ ರಸ್ತೆಗಳು ನಾಲ್ಕು ತಾಲೂಕಿನಲ್ಲಿ ಯಾವ ಹಳ್ಳಿಗಳಿಗೂ ತೊಂದರೆಯಾಗದಂತೆ (ಪುಣೆ, ನೆಲಮಂಗಲ, ಚೆನೈ,) ಕಡೆ ಹೊರಡುವ ಮಾರ್ಗಗಳಿಗೆ ಸಂಬಂಧಿಸಿದಂತೆ ಕ್ರಮ ವಹಿಸಬೇಕು. ಭಾರಿ ವಾಹನಗಳು ಟೋಲ್ ಅನ್ನು ತಪ್ಪಿಸಲು ಅಡ್ಡ ದಾರಿಗಳಲ್ಲಿ ಹೊಗುವುದು ಕಂಡುಬಂದಿದ್ದು ಇದರ ಬಗ್ಗೆ ನಿಗಾವಹಿಸಲು ಅಧಿಕಾರಿಗಳಿಗೆ ಮುನಿಯಪ್ಪ ಸೂಚಿಸಿದರು.

ಕೃಷಿ ಇಲಾಖೆ ವತಿಯಿಂದ ರೈತರಿಗೆ ಗೊಬ್ಬರ, ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ತೊಂದರೆ ಯಾಗದಂತೆ ನೀಡಬೇಕು. ಜಿಲ್ಲೆಯಲ್ಲಿನ ಪ್ರಗತಿಯ ವಿಚಾರಗಳ ಮಾಹಿತಿಯನ್ನು ಶಾಸಕರ ಗಮನಕ್ಕೆ ಕಾಲ ಕಾಲಕ್ಕೆ ನೀಡಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಅಧಿಕಾರಿಗಳು ಇದರಲ್ಲಿ ಯಾವುದೇ ತಾರತಮ್ಯವನ್ನು ಮಾಡದೆ ಎಲ್ಲರಿಗೂ ಸೌಲಭ್ಯ ತಲುಪಿಸುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ಪೋಡಿ ಮುಕ್ತ ಮಾಡಲು ಜಿಲ್ಲಾಧಿಕಾರಿಗೆ ಮುನಿಯಪ್ಪ ಸೂಚನೆ ನೀಡಿದರು.

ಬೆಳಗಾದರೆ ರೈತರು ಸರಕಾರಿ ಕಚೇರಿಗಳಿಗೆ ತಿರುಗುವುದನ್ನು ಕಡಿಮೆ ಮಾಡಲು ಅಧಿಕಾರಿಗಳು ಅವರ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ಪ್ರತಿ ತಾಲ್ಲೂಕಿನಲ್ಲಿ ರುದ್ರ ಭೂಮಿಯ ಜಾಗಕ್ಕೆ ಸರಿಯಾದ ಕಾಂಪೌಂಡ್ ಹಾಗೂ ಮುಳ್ಳಿನ ತಂತಿಯನ್ನು ಅಳವಡಿಸಲು ಜಿಲ್ಲಾಧಿಕಾರಿಗೆ ಅವರು ಹೇಳಿದರು.

ಸಭೆಯಲ್ಲಿ ಶಾಸಕರಾದ ಶರತ್ ಬಚ್ಚೇಗೌಡ, ಧೀರಜ್ ಮುನಿರಾಜು, ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜಣ್ಣ, ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಶಿವಶಂಕರ್, ಜಿ.ಪಂ.ಸಿಇಒ ಡಾ.ಅನುರಾಧಾ, ಅಪರ ಜಿಲ್ಲಾಧಿಕಾರಿ ಅಮರೇಶ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News