ಕೋಲಾರ ಕಾಂಗ್ರೆಸ್‌ ಶಾಸಕರ ರಾಜಿನಾಮೆ ಎಚ್ಚರಿಕೆ ವಿಚಾರ : ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದೇನು?

Update: 2024-03-27 13:58 GMT

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ  ಟಿಕೆಟ್‌ ಯಾರಿಗೆ ಕೊಡಬೇಕೆಂದು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಸೇರಿ ತೀರ್ಮಾನ ಮಾಡುತ್ತಾರೆ. ಈ ಸಂಬಂಧ ರಾಜೀನಾಮೆ ನೀಡಲು ಹೋದವರ ಕುರಿತು ನಾನು ಮಾತಾಡಲ್ಲ’ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಎಲ್ಲರೂ ಹೇಳಿದ್ದರು. ರಮೇಶ್ ಕುಮಾರ್ ಮತ್ತು ಅವರ ಬೆಂಬಲಿಗರು ಕೂಡಾ ಅದೇ ಮಾತು‌ ಹೇಳಿದ್ದರು. ಆ ಸಭೆಯಲ್ಲಿ ಎಲ್ಲರೂ ಇದ್ದರು. ಈ ಹಿಂದೆ ಅಹಿತಕರ ಘಟನೆ ನಡೆದಿದ್ದರೆ ಮರೆಯೋಣ ಎಂದೂ ಆ ಸಭೆಯಲ್ಲಿ ನಾನು ಹೇಳಿದ್ದೆ’ ಎಂದರು.

ʼಕೋಲಾರ ಲೋಕಸಭಾ ಕ್ಷೇತ್ರದಿಂದ ಜಾಫರ್ ಷರೀಫ್, ಶಂಕರಾನಂದ ಬಳಿಕ ಏಳು ಬಾರಿ ನಿರಂತರವಾಗಿ ನಾನು ಗೆದ್ದಿದ್ದೇನೆ. ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿದೆʼ ಎಂದು ಹೇಳಿದರು.

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಅನ್ನು ಸಚಿವ ಕೆ.ಎಚ್‌. ಮುನಿಯಪ್ಪ ಕುಟುಂಬಕ್ಕೆ ನೀಡಬಾರದು ಎಂದು ಪಟ್ಟು ಹಿಡಿದಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ನಸೀರ್‌ ಅಹ್ಮದ್‌ ಹಾಗೂ ಅನಿಲ್‌ ಕುಮಾರ್‌ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬುಧವಾರ ಬೆಳಿಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಬಂದರೂ ರಾಜೀನಾಮೆ ನೀಡದೆ ತೆರಳಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಸೀರ್ ಅಹ್ಮದ್, ‘ರಾಜೀನಾಮೆ ನೀಡುವ ವಿಚಾರದಲ್ಲಿ ನಾವು ನಮ್ಮ ನಾಯಕರನ್ನು ಸಂಪರ್ಕ ಮಾಡಲು ಹೋಗಿಲ್ಲ. ಸಭಾಪತಿ ಕೊಠಡಿಗೆ ಬಂದ ನಂತರ ನಮಗೆ ಮುಖ್ಯಮಂತ್ರಿ ಫೋನ್ ಮಾಡಿ, ರಾಜೀನಾಮೆ ನೀಡಬೇಡಿ, ಸಂಜೆ ಬೆಂಗಳೂರಿಗೆ ಬರುತ್ತೇನೆ. ಕೂತು ಚರ್ಚೆ ಮಾಡೋಣ ಎಂದು ಹೇಳಿದ್ದಾರೆ’ ಎಂದು ವಿವರಣೆ ನೀಡಿದರು.

ಸಿಎಂ ನಿವಾಸದಲ್ಲಿ ಸಭೆ: ಕೋಲಾರ ಜಿಲ್ಲಾ ಕಾಂಗ್ರೆಸ್‍ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಶಮನ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಶಾಸಕರ ಸಭೆ ನಡೆಸಲು ನಿರ್ಧರಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News