ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ರಾಜೀನಾಮೆ

Update: 2024-03-17 16:08 GMT

ಬೆಂಗಳೂರು: ‘ಪಕ್ಷದಲ್ಲಿ ಸೇವೆಗೆ ಮನ್ನಣೆ ನೀಡುವ ಯಾವುದೇ ಕನಿಷ್ಠ ಪ್ರಯತ್ನ ನಡೆದಿಲ್ಲ’ ಎಂದು ಆರೋಪಿಸಿ ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ರವಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಗದ್ದುಗೆ ಏರಿದ ನಂತರದ ದಿನಗಳಲ್ಲಿ ನನ್ನ ಹಾಗೆ ಪಕ್ಷದ ಗೆಲುವಿಗೆ ಕಾರಣರಾದ ಸಹಸ್ರಾರು ಕಾರ್ಯಕರ್ತರ ಸೇವೆಯನ್ನು ಗುರುತಿಸುವ ಹಾಗೂ ಮನ್ನಣೆ ನೀಡುವ ಯಾವುದೇ ಕನಿಷ್ಠ ಪ್ರಯತ್ನ ಈವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಥವಾ ಪಕ್ಷದಿಂದ ಆಗಿಲ್ಲ ಎನ್ನುವುದು ನೋವಿನ ಸಂಗತಿ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಪಕ್ಷದಿಂದಾಗಲಿ, ಸರಕಾರದಿಂದಾಗಲಿ ಈವರೆಗೆ ನಾನು ವೈಯಕ್ತಿಕವಾಗಿ ಯಾವುದೇ ಲಾಭವಾಗಲಿ, ಅಧಿಕಾರವಾಗಲಿ ಬಯಸಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾಗಿದ್ದೆ. ಆದರೆ, ಇಂದು ನನ್ನ ಉಸಿರುಗಟ್ಟಿಸುವ ಪರಿಸ್ಥಿತಿ ಪಕ್ಷದಲ್ಲಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಸಂಕೇತ್ ಏಣಗಿ ಆರೋಪಿಸಿದ್ದಾರೆ.

ನಾನು ವೀರಶೈವ ಲಿಂಗಾಯತ ಸಮುದಾಯದವನಾಗುದ್ದಕ್ಕೆ ಹಾಗೂ ನನ್ನ ಪ್ರಾಮಾಣಿಕತೆ ಮತ್ತು ನಿಷ್ಟುರತೆಗಾಗಿ ಪಕ್ಷದಲ್ಲಿ ಬಲಿಪಶುವಾಗುವುದಿಲ್ಲ. ಅಧಿಕಾರದ ಗದ್ದುಗೆ ಏರಿದ ನಂತರ ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ಮಾನವೀಯತೆಯ ಭಾವನೆಗಳೇ ಪಕ್ಷದ ಕೆಲ ನಾಯಕರುಗಳಲ್ಲಿ ಆವಿಯಾಗುತ್ತಿರುವ ಸಂದರ್ಭದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪಕ್ಷದ ಎಲ್ಲ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಂಕೇತ್ ಏಣಗಿ ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News