ಕೆಪಿಎಸ್ಸಿ ಪರೀಕ್ಷೆ ಫಲಿತಾಂಶ ತಡೆಹಿಡಿಯಲು ಕರವೇ ಆಗ್ರಹ

Update: 2025-02-18 20:50 IST
ಕೆಪಿಎಸ್ಸಿ ಪರೀಕ್ಷೆ ಫಲಿತಾಂಶ ತಡೆಹಿಡಿಯಲು ಕರವೇ ಆಗ್ರಹ
  • whatsapp icon

ಬೆಂಗಳೂರು : 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಅನ್ಯಾಯವಾಗಿದ್ದು, ಈ ಕೂಡಲೇ ರಾಜ್ಯ ಸರಕಾರ ಕೆಪಿಎಸ್ಸಿ ಪರೀಕ್ಷೆ ಫಲಿತಾಂಶ ತಡೆಹಿಡಿಯುವುದರ ಜತೆಗೆ ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಿ ಆಗ್ರಹಿಸಲಾಯಿತು.

ಮಂಗಳವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು, ಕೆಪಿಎಸ್ಸಿ ನಡೆಸಿರುವ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಮತ್ತೆ ಸರಕಾರ ಅನ್ಯಾಯ ಮಾಡಿದೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಈ ವೇಳೆ ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ನಾರಾಯಣಗೌಡ, ಈ ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಅನುವಾದದ ಸಮಸ್ಯೆ ಕಂಡುಬಂದಿತ್ತು. ಅದರ ವಿರುದ್ಧ ಧ್ವನಿಯೆತ್ತಿ ಮರುಪರೀಕ್ಷೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದೇವು. ಆದರೆ ಮರುಪರೀಕ್ಷೆಯಲ್ಲೂ ಕೂಡ ತಪ್ಪನ್ನು ಎಸೆಗಿದ್ದು, ಅನುವಾದದಲ್ಲಿ ಮತ್ತೆ ಸಮಸ್ಯೆ ಉಂಟಾಗಿದೆ ಎಂದರು.

ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ಕೇಳಲಾದ 79 ಪ್ರಶ್ನೆಗಳು ತಪ್ಪಾಗಿದ್ದು, ಇದರಿಂದ ಸಾವಿರಾರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ತಪ್ಪುಗಳಿಂದಾಗಿ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡಿಗರ ಸಂಖ್ಯೆ ಕುಸಿದಿದೆ ಎಂದು ಆರೋಪಿಸಿದರು.

ಕೆಎಎಸ್ ಕನ್ನಡ ಪರೀಕ್ಷಾರ್ಥಿಗಳಿಗೆ ಪದೇ ಪದೇ ಅನ್ಯಾಯ ಆಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಕನ್ನಡ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಹಾಗಾಗಿ, ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಮಾಡಿ ಅದನ್ನು ಇಂಗ್ಲೀಷ್‌ ಗೆ ಅನುವಾದ ಮಾಡಿ ಎಂಬ ಕೂಗು ನಮ್ಮದು ಇತ್ತು. ಕನ್ನಡ ಭಾಷೆ ಆಡಳಿತ ಭಾಷೆ ಆದುದರಿಂದ ಇದೇ ಸಹಜವಾಗಿ ನಡೆಯಬೇಕಿತ್ತು. ಆದರೆ, ಕೆಪಿಎಸ್ಸಿ ಎಡವಟ್ಟಿನಿಂದ ಮತ್ತೆ ಸಮಸ್ಯೆ ಉಂಟಾಗಿ ಹಲವಾರು ಮಂದಿಗೆ ತೊಂದರೆಯಾಗಿದೆ. ಈ ವಿಚಾರಕ್ಕೆ ಸರಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News