ಜೆಡಿಎಸ್-ಬಿಜೆಪಿ ಮೈತ್ರಿಗೆ ಹುಳಿ ಹಿಂಡಲು ಕೆಲ ಬಿಜೆಪಿಗರು, ಕಾಂಗ್ರೆಸ್ ಜತೆ ಶಾಮೀಲಾಗಿದ್ದಾರೆ : ಕುಮಾರಸ್ವಾಮಿ
ಬೆಂಗಳೂರು : "ಏನಾದರೂ ಮಾಡಿ ಕುಮಾರಸ್ವಾಮಿ ವರ್ಚಸ್ಸು ಕುಗ್ಗಿಸಬೇಕು ಅನ್ನುವುದು ಕೆಲವರ ಉದ್ದೇಶ. ನಾನು ಎಲ್ಲಾ ಬಿಜೆಪಿ ನಾಯಕರ ಬಗ್ಗೆ ಹೀಗೆ ಹೇಳುತ್ತಿಲ್ಲ. ಕೆಲವರಿಗೆ ಈ ಮೈತ್ರಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿದೆ" ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರವಿವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸದ ಬಳಿ ಮಾತನಾಡಿದ ಅವರು, ʼಮೈತ್ರಿಯನ್ನು ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿರಬಹುದು. ನನ್ನ ಗಮನಕ್ಕೂ ಹಲವಾರು ವಿಚಾರಗಳು ಬರುತ್ತಿವೆ. ಯೋಗೇಶ್ವರ್ ಅವರು ಉಪ ಮುಖ್ಯಮಂತ್ರಿಯನ್ನು ಈಗಾಗಲೇ ಎರಡು ಬಾರಿ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಯಾಕಾಗಿ ಭೇಟಿ ಮಾಡಿದ್ದರು ಎಂಬುದು ನನಗೆ ಬೇಕಿಲ್ಲʼ ಎಂದರು.
ಇನ್ನೂ ನಿರ್ಧಾರ ಮಾಡಿಲ್ಲ :
ಈಗ ಚನ್ನಪಟ್ಟಣ ವಿಚಾರವಾಗಿ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ವರಿಷ್ಠ ನಾಯಕರೇ ಹಲವು ಬಾರಿ ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಸ್ಪರ್ಧಿಸಿರುವ ಕ್ಷೇತ್ರ ಎನ್ನುವುದು ಅವರಿಗೆ ಗೊತ್ತಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚನ್ನಪಟ್ಟಣದಲ್ಲಿ ನಾವು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣ ವಿಚಾರದಲ್ಲಿ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಕೆಲವರು ಕಾಂಗ್ರೆಸ್ ಜತೆ ಶಾಮೀಲಾಗಿದ್ದಾರೆ :
ʼಬಿಜೆಪಿಯಲ್ಲಿ ಇರುವಂತಹ ಕೆಲವೇ ಕೆಲವರು ಕುಮಾರಸ್ವಾಮಿಗೆ ದೆಹಲಿ ಮಟ್ಟದಲ್ಲಿ ಉತ್ತಮ ಬಾಂಧವ್ಯ ಇದೆ. ಹೀಗಾಗಿ ಅವರಿಗೆ ಏನಾದರೂ ಸಮಸ್ಯೆ ಉದ್ಭವ ಮಾಡಬೇಕು ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಅದು ನನ್ನ ಕಿವಿಗೂ ಬಿದ್ದಿದೆ. ಬಿಜೆಪಿ - ಜೆಡಿಎಸ್ ಮೈತ್ರಿಗೆ ಹುಳಿ ಹಿಂಡುವವರು ಬಹಳಷ್ಟು ಜನ ಇದ್ದಾರೆ. ಒಟ್ಟಾರೆ ಕುಮಾರಸ್ವಾಮಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವರ ಪ್ರಯತ್ನ ಫಲ ಕೊಡುವುದಿಲ್ಲʼ ಎಂದು ಕಿಡಿಕಾರಿದರು.
ಹುಳಿ ಹಿಂಡುವವರು ನಮ್ಮ ಪಕ್ಷದಲ್ಲಿ ಇಲ್ಲ. ಆದರೆ ಅಲ್ಲಿನ ಹುಳಿ ಹಿಂಡುವವರು ಕಾಂಗ್ರೆಸ್ ನಾಯಕರ ಜತೆ ಸೇರಿಕೊಂಡಿದ್ದಾರೆ. ಅದು ನನಗೆ ಗೊತ್ತಿದೆ. ಪ್ರಧಾನ ಮಂತ್ರಿ ಅವರನ್ನು ಅಸ್ಥಿರಗೊಳಿಸಲು ಅವರು ಕಾಂಗ್ರೆಸ್ ನಾಯಕರ ಜತೆ ಸೇರಿಕೊಂಡು ಮಸಲತ್ತು ಮಾಡುತ್ತಿರಬಹುದು. ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಆಗಬಾರದು. ಇದೆಲ್ಲವನ್ನು ಗಮನಿಸುತ್ತಿದ್ದೇನೆ. ಇದಕ್ಕೆ ನಾನು ಅವಕಾಶ ಕೊಡಬೇಕಾ? ಎಂದು ಅವರು ಪ್ರಶ್ನಿಸಿದರು.