ಕೆಯುಡಬ್ಲ್ಯೂಜೆ ಕ್ಯಾಲೆಂಡರ್ ಬಿಡುಗಡೆ, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

Update: 2023-12-31 16:06 GMT

ಬೆಂಗಳೂರು: ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯುಜೆ) ವತಿಯಿಂದ 2024ರ ಕ್ಯಾಲೆಂಡರ್ ಬಿಡುಗಡೆ, ಹಾಗೂ ಅತ್ಯುತ್ತಮ ಚಲನಚಿತ್ರ ವಿಮರ್ಶಕರಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬಾ.ನಾ. ಸುಬ್ರಹ್ಮಣ್ಯ(ಸುಬ್ಬಣ್ಣ) ಮತ್ತು ಅತ್ಯುತ್ತಮ ಚಿತ್ರ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಎನ್.ಆರ್. ನಂಜುಂಡೇಗೌಡ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಘದ ಸಭಾಂಗಣದಲ್ಲಿ ರವಿವಾರ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಮಾತನಾಡಿ, ಚಲನಚಿತ್ರವನ್ನು ವಿಮರ್ಶಿಸಿ ಬರೆಯಬೇಕಾದರೆ ಅದರ ಸವಾರ್ಂಗೀಣ ಮಾಹಿತಿಯನ್ನು ತಿಳಿದಿರಬೇಕು. ಬದ್ದತೆಯಿಂದ ವೃತ್ತಿ ಧರ್ಮ ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಾಶಸ್ತಿ ಪುರಸ್ಕೃತರಾದ ಸುಬ್ಬಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲದೆ, ಕನ್ನಡ ಚಿತ್ರೋದ್ಯಮದ ಕಾವಲುಗಾರನಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದರು.

ಯಾವುದೇ ಪೂರ್ವಾಗ್ರಹ ಪೀಡಿತರಾಗದೆ, ಪ್ರೇಕ್ಷಕರಿಗೆ ಚಿತ್ರದ ಸಾರವನ್ನು ತಲುಪಿಸುವ ಜವಾಬ್ದಾರಿಯನ್ನು ವಿಮರ್ಶಕ ಮಾಡಬೇಕು. ಅದಕ್ಕಾಗಿ ವಿಮರ್ಶಕರಿಗೆ ತರಬೇತಿ ಶಿಬಿರಗಳನ್ನು ನಡೆಸಿ ಚಿತ್ರದ ಸಾರವನ್ನು ಸಾರ್ವಜನಿಕರ ಮುಂದೆ ಹೇಗಿಡಬೇಕೆಂದು ತಿಳಿಸಿಕೊಡುವ ಕೆಲಸವಾಗಬೇಕಾಗಿದೆ ಎಂದು ನಂಜುಂಡೇಗೌಡ ತಿಳಿಸಿದರು.

ಅತ್ಯುತ್ತಮ ಚಿತ್ರ ವಿಮರ್ಶಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾ.ನಾ.ಸುಬ್ರಹ್ಮಣ್ಯ ಮಾತನಾಡಿ, ವೃತ್ತಿಗೆ ಬಂದಾಗ ಮೊದಲ ಸಂದರ್ಶನವನ್ನು ಶಂಕರನಾಗ್ ಮತ್ತು ಅನಂತನಾಗ್ ಅವರೊಂದಿಗೆ ನಡೆಸಿದ್ದು ಮರೆಯಲಾಗದ ಅನುಭವ. ಅರವತ್ತರ ದಶಕದಲ್ಲಿ ರಾಜ್ಯದಲ್ಲಿ ಬರಗಾಲ ಉಂಟಾದ ಸಂದರ್ಭದಲ್ಲಿ ನಿಧಿ ಸಂಗ್ರಹಣೆಯಲ್ಲಿ ವರನಟ ಡಾ.ರಾಜ್‍ಕುಮಾರ್ ಅವರೊಂದಿಗಿನ ಓಡನಾಟವನ್ನೂ ಮರೆಯಲಾರೆ ಎಂದರು.

ವೈಯಕ್ತಿಕ ಬದುಕಿನಲ್ಲಿ ನಾನೆಂದೂ ಓಲೈಕೆ ಪತ್ರಕರ್ತನಾಗಲಿಲ್ಲ. ಸಮಷ್ಠಿ ದೃಷ್ಟಿಯಿಂದ ಕೆಲಸ ಮಾಡಿಕೊಂಡು ಬಂದಿರುವುದಕ್ಕೆ ಈ ಗೌರವ ಸಿಕ್ಕಿದೆ. ಈ ಸಂದರ್ಭದಲ್ಲಿ ನೈಜ ಪತ್ರಕರ್ತರ ವೃತ್ತಿಪರವಾದ ಸಂಘಟನೆಯಾಗಿರುವ ಕೆಯುಡಬ್ಲ್ಯುಜೆನನ್ನನ್ನು ಗೌರವಿಸಿರುವುದು ತವರಿನಲ್ಲಿ ಸಿಕ್ಕ ಸನ್ಮಾನವಾಗಿದೆ. ಅದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸುಬ್ರಹ್ಮಣ್ಯ ಹೇಳಿದರು.

ಈ ವೇಳೆ ಐಎಫ್‍ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಚೇತನ್ ನಾಡಿಗೇರ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News