ಕುಮಾರಸ್ವಾಮಿ ಯಾವ ತಿಮಿಂಗಿಲವನ್ನಾದರೂ ಹಿಡಿದು ನುಂಗಿಕೊಳ್ಳಲಿ : ಡಿ.ಕೆ.ಶಿವಕುಮಾರ್ ತಿರುಗೇಟು

Update: 2024-05-14 12:39 GMT

ಬೆಂಗಳೂರು : ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‍ಡ್ರೈವ್ ವಿಚಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ, ಹಿಡಿದು, ಬಡಿದು ಅವರೇ ನುಂಗಿಕೊಳ್ಳಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಶ್ಲೀಲ ಪೆನ್‍ಡ್ರೈವ್ ವಿಚಾರದಲ್ಲಿ ಅಂದು ಮಹಾನಾಯಕ ಎಂದು ಟೀಕೆ ಮಾಡಿದ್ದ ಕುಮಾರಸ್ವಾಮಿ ಇಂದು ತಮ್ಮನ್ನು ತಿಮಿಂಗಿಲ ಎಂದು ಹೇಳಿದ್ದಾರೆ. ಅವರಿಗೆ ಯಾರನ್ನು ಹಿಡಿದು ಬಡಿದು ಒಳಗೆ ಹಾಕಬೇಕು ಅನ್ನಿಸುತ್ತದೋ ಅವರನ್ನು ಒಳಗೆ ಹಾಕಿಸಲಿ. ತಿಮಿಂಗಿಲಗಳನ್ನು ಅವರೇ ನುಂಗಿಕೊಳ್ಳಲಿ. ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ನಾನು ಕೇವಲ ಪ್ರದರ್ಶಕ ಅಷ್ಟೇ’ ಎಂದರು.

ಹಸ್ತಕ್ಷೇಪವಿದ್ದರೆ ಬೆಲೆ ತೆರಲು ಸಿದ್ಧ: ‘ನಾನು ಬೇರೆಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ಧೇನೆ. ನಾನು ರಾಜಕೀಯ ಪಕ್ಷದ ಅಧ್ಯಕ್ಷ. ಈ ಪ್ರಕರಣದಲ್ಲಿ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ. ಈಗ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಅವರು ತಿಳಿಸಿದರು.

ರೇವಣ್ಣ ಸ್ಥಿತಿ ನೋಡಿ ಬೇಸರ: ‘ರೇವಣ್ಣ ಸ್ಥಿತಿ ನೋಡಿ ನನಗೂ ಬೇಸರವಾಗುತ್ತಿದೆ. ಅವರದು ದೊಡ್ಡ ಕುಟುಂಬ, ಈ ರೀತಿ ಆಗಬಾರದು ಎಂದು ಬಯಸುತ್ತೇನೆ. ಅವರು ನನಗೆ ಏನಾದರೂ ಬಯಸಲಿ. ಆದರೆ ನಾನು ಮಾತ್ರ ಅವರಿಗೆ ಕೆಟ್ಟದ್ದು ಬಯಸುವುದಿಲ್ಲ. ನಾನು ಪ್ರಕೃತಿ ನಿಯಮ, ನ್ಯಾಯದ ಮೇಲೆ ನಂಬಿಕೆ ಇಟ್ಟವನು.‌

ಕುಮಾರಣ್ಣನಿಗೆ ವಿಧಾನಸಭೆಯಲ್ಲಿ ಉತ್ತರ ನೀಡುತ್ತೇನೆ :

ನಾನು ರಾಜಕೀಯ ಷಡ್ಯಂತ್ರಕ್ಕೆ ಗುರಿ ಆಗಿದ್ದವನೇ ಮತ್ತು ಅದರ ನೋವು ಅನುಭವಿಸಿದವನೇ. ಆ ವೇಳೆಯಲ್ಲಿ ನಾನು ಎಷ್ಟು ಗಟ್ಟಿಯಾಗಿ, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಇದ್ದೆ ಎಂಬುದು ನನಗೆ ಮಾತ್ರ ಗೊತ್ತಿದೆ. ದೇವರು ನನಗೆ ಎಲ್ಲ ರೀತಿಯ ರಕ್ಷಣೆ ನೀಡಿದ್ದು, ನಾನು ಬೇರೆಯವರಿಗೆ ಕೆಟ್ಟದು ಬಯಸುವುದಿಲ್ಲ. ಆದರೆ ನನ್ನ ಬ್ರದರ್ ಕುಮಾರಣ್ಣನಿಗೆ ವಿಧಾನಸಭೆಯಲ್ಲಿ ಉತ್ತರ ನೀಡುತ್ತೇನೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News