ಜನರು, ಜನಪ್ರತಿನಿಧಿಗಳು, ಮಾಧ್ಯಮಗಳು ಅದರದ್ದೇ ಆದ ನೈತಿಕತೆ ಹೊಂದಿರಲಿ: ಸ್ಪೀಕರ್ ಯು.ಟಿ.ಖಾದರ್

Update: 2024-03-05 13:22 GMT

ಬೆಂಗಳೂರು: ಸಮಾಜದಲ್ಲಿ ಜನರು, ಜನಪ್ರತಿನಿಧಿಗಳು ಸೇರಿದಂತೆ ಮಾಧ್ಯಮಗಳೂ ಅದರದ್ದೇ ಆದ ನೈತಿಕತೆಯನ್ನು ಹೊಂದಿರಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಬೆಂಗಳೂರು ನಗರ ವಿಶ್ವವಿದ್ಯಾಲಯವು ಜ್ಞಾನಜ್ಯೋತಿ ಸಭಾಂಗಣದ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ‘ನಿಷ್ಪಕ್ಷಪಾತ ಚುನಾವಣೆ ಮತ್ತು ಮಾಧ್ಯಮ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ನಾಯಕತ್ವ ಗುಣಗಳನ್ನು ಹೊಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದರು.

ಮಾಧ್ಯಮಗಳು ಮತದಾನದ ಮಹತ್ವವನ್ನು ಜನರಿಗೆ ಅರ್ಥೈಸುವ ಕೆಲಸವನ್ನು ಮಾಡಬೇಕು. ನಮ್ಮ ಸಂವಿಧಾನ ರಚನೆ ಮಾಡುವಾಗ ಮಹಿಳೆಯರಿಗೆ ಮತದಾನದ ಹಕ್ಕು ನೀಡುವ ಬಗ್ಗೆ ಅನೇಕ ಆಕ್ಷೇಪಗಳು ಬಂದವು. ಆದರೂ, ಡಾ.ಬಿ.ಆರ್.ಅಂಬೇಡ್ಕರ್ ಅವರು 21ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರಿಗೆ ಮತದಾನ ಕಡ್ಡಾಯ ಎಂದು ತಿಳಿಸುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ಯಾವ ಪಕ್ಷದವರು ಎಷ್ಟು ದುಡ್ಡು ಕೊಟ್ಟರು ಎನ್ನುವುದರ ಮೇಲೆ ಮತದಾನ ನಿಂತಿದೆ. ಈ ಪದ್ದತಿ ಮೊದಲು ಸಮಾಜದಿಂದ ತೊಲಗಬೇಕು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ನಡೆಯುವ ಕೆಲವೊಂದು ಸೂಕ್ಷ್ಮಗಳನ್ನು ಇಂದಿನ ಮಾಧ್ಯಮರಂಗವು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಸುದ್ದಿಯ ಮಹತ್ವವನ್ನು ಕಳೆಯುತ್ತಿವೆ. ಬದಲಾಗಿ ಮಾಧ್ಯಮಗಳು ರಾಜ್ಯದ ಟಿಆರ್ ಪಿ ಹೆಚ್ಚಿಸುವ ಕೆಲಸವನ್ನು ಮಾಡಬೇಕೆ ಹೊರತು, ತಮ್ಮ ಚಾನೆಲ್‍ನ ಟಿಆರ್ ಪಿ ಹೆಚ್ಚಿಸುವುದು ಮಾತ್ರ ಆಗಬಾರದು ಎಂದು ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು.

ಚುನಾವಣೆ, ರಾಜಕೀಯ, ಮಾಧ್ಯಮಗಳ ಕಾರ್ಯವೈಖರಿ, ಸಾಮಾಜಿಕ ಪ್ರಜ್ಞೆಯೊಂದಿಗೆ ವಿದ್ಯಾರ್ಥಿಗಳಿಗೆ ಜ್ಞಾನ ಬಂಡಾರ ಹೆಚ್ಚಿಸಲು ಇಂತಹ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳ ಅಗತ್ಯವಿದೆ. ಯುವಕರು ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ಅಥವಾ ರಾಜಕೀಯದಲ್ಲಿ ಆಸಕ್ತಿಯುಳ್ಳವರು ಆಯಾ ಕ್ಷೇತ್ರದಲ್ಲಿ ‘ದಿ ಬೆಸ್ಟ್’ ಆಗಿ ಹೊರಹೊಮ್ಮಬೇಕು. ಎಂದು ಯು.ಟಿ.ಖಾದರ್ ಕಿವಿಮಾತು ಹೇಳಿದರು.

ರಾಜಕೀಯ ಕ್ಷೇತ್ರಕ್ಕೆ ಆಗಮಿಸುವವರಿಗೆ ‘ನಾಯಕತ್ವದ ಆಡಳಿತ’ ಎಂಬ ತರಬೇತಿ ತರಗತಿಗಳನ್ನು ನಡೆಸುವ ಚಿಂತನೆ ನಡೆಯುತ್ತಿದೆ. ಇದರಲ್ಲಿ ಆರು ತಿಂಗಳು ಪಠ್ಯ ಹಾಗೂ 6 ತಿಂಗಳು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದು ಯು.ಟಿ.ಖಾದರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News