ಚುನಾವಣೆಯಲ್ಲಿ ದಲಿತರ ವಿರೋಧಿ, ಮನುವಾದಿ ಬಿಜೆಪಿಯನ್ನು ಸೋಲಿಸೋಣ : ದಲಿತ ಸಂಘಟನೆಗಳ ಕರೆ

Update: 2024-04-02 14:08 GMT

ಬೆಂಗಳೂರು: ದಲಿತ ವಿರೋಧಿ ಧೋರಣೆಗಳನ್ನು ಹೊಂದಿರುವ ಬಿಜೆಪಿ ನೇತೃತ್ವದ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದಲಿತರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಲಾಗುತ್ತದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ದಲಿತ ವಿರೋಧಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ ಅನ್ನು ಸೋಲಿಸಬೇಕಿದೆ ಎಂದು ದಲಿತ ಸಂಘಟನೆಗಳ ವಿವಿಧ ಮುಖಂಡರು ಕರೆ ನೀಡಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ನಡೆದ ‘ದಲಿತ-ಕೂಲಿಕಾರರ ರಾಜ್ಯಮಟ್ಟದ ದುಂಡುಮೇಜಿನ ಸಭೆ’ಯಲ್ಲಿ ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ(ಜನ್ನಿ), ಸಾಹಿತಿ ಸುಬ್ಬು ಹೊಲೆಯರ್ ಡಿಎಚ್‍ಎಸ್‍ನ ರಾಜ್ಯಾಧ್ಯಕ್ಷ ಗೋಪಾಲ ಕೃಷ್ಣ ಹರಳಹಳ್ಳಿ, ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಮೋಹನ್ ರಾಜ್, ಡಿ.ಶಿವಶಂಕರ್, ಡಾ.ಮಹೇಶ್ ಕುಮಾರ್ ರಾಥೋಡ್ ಸೇರಿ ಮತ್ತಿತರರು ಭಾಗವಹಿಸಿ ನಿರ್ಣಯ ಕೈಗೊಂಡರು.

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ರವರು ದಲಿತರಿಗಾಗಿ ಸಂವಿಧಾನಾತ್ಮಕವಾಗಿ ಬದ್ಧಗೊಳಿಸಿದ್ದ ಹಕ್ಕುಗಳನ್ನು ನಾಶಗೊಳಿಸುತ್ತದೆ. ಹೀಗಾಗಿ ದಲಿತ ಮತದಾರರು ಎಚ್ಚರಗೊಳ್ಳಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ದಲಿತ ವಿರೋಧಿ ಬಿಜೆಪಿ-ಜೆಡಿಎಸ್ ಸೋಲಿಬೇಕಿದೆ. ಕೋಮುವಾದಿ, ಮನುವಾದಿಗಳನ್ನು ಸೋಲಿಸುವ ಮೂಲಕ ಬಿಜೆಪಿಯನ್ನು ಹಿಮ್ಮೆಟ್ಟಿಸಲು ದಲಿತರು ಒಂದಾಗಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ನಿರ್ಣಯ ಕೈಗೊಂಡರು.

ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ, ಮನುವಾದ ವನ್ನು ಜಾರಿಗೆ ತರುತ್ತಿರುವ ಕೋಮುವಾದಿಗಳನ್ನು ಹಾಗೂ ದೇಶವನ್ನು ಲೂಟಿ ಮಾಡುತ್ತಿರುವ ಕಾರ್ಪೋರೇಟ್ ಶಕ್ತಿಗಳನ್ನು ಹಿಮ್ಮೆಟಿಸಲು, ಬಿಜೆಪಿ - ಜೆಡಿಎಸ್ ಸೋಲಿಸಬೇಕು. ಕ್ಷೇತವಾರು ದಲಿತ ಸಂಘಟನೆ ಗಳ ದುಂಡು ಮೇಜಿನ ಸಭೆ ನಡೆಸಬೇಕು. ಲೋಕಸಭಾ ಕ್ಷೇತ್ರದಲ್ಲಿ (ಮಿಸಲು ಕ್ಷೇತ್ರದಲ್ಲಿ) ದಲಿತ ಸಂಘಟನೆಗಳು ಐಕ್ಯತೆಯಿಂದ ಪ್ರಚಾರ ಆಂದೋಲನ ಹಮ್ಮಿಕೊಂಡು ದಲಿತರನ್ನು ಜಾಗೃತಗೊಳಿಸುವುದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯ ಮೂಲಕ ಮೋದಿ ಸರಕಾರವು ಸಮಾಜದ ಎಲ್ಲರಿಗೂ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಹೇಳುತ್ತಿರುತ್ತದೆ. ಪರಿಶಿಷ್ಟ ಜಾತಿಯ ಉಪಯೋಜನೆಗೆ ಅನುದಾನವನ್ನು ಬಜೆಟ್ ನ ಒಟ್ಟು ವೆಚ್ಚದ ಶೇ.16.6 ಏರಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ ಇದು 2024-25ರಲ್ಲಿ ಒಟ್ಟು ಬಜೆಟ್ ವೆಚ್ಚದ ಶೇ.6.01 ಕ್ಕೆ ಇಳಿಸಿದೆ. ಜೊತೆಗೆ ಬಿಜೆಪಿಯು ಮನುವಾದದ ನಿಯಮಗಳನ್ನು ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ವಿರುದ್ಧ ಉದ್ದೇಶ ಪೂರಕವಾಗಿಯೇ ತಾರತಮ್ಯ ಎಸಗುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದರು.

ಮೋದಿ ಸರಕಾರದಲ್ಲಿ ಸಂವಿಧಾನದ ಮೇಲೆ ದಾಳಿ, ದಲಿತರ ಮೇಲೆ ದೌರ್ಜನ್ಯಗಳು: ದಲಿತರ ಹಾಗೂ ಇತರೆ ತಳಸಮುದಾಯಗಳ ಹಿತಾಸಕ್ತಿಗಳನ್ನು ಪೋಷಿಸುವ ಮತ್ತು ಅವರ ಹಕ್ಕುಗಳನ್ನು ಸಂರಕ್ಷಿಸುವ ನಿಜವಾದ ಉದ್ದೇಶ ಬಿಜೆಪಿಗಿಲ್ಲ. ಬಿಜೆಪಿ ಒಬ್ಬ ಸಂಸದರು ಈಗಾಗಲೆ ಘೋಷಿಸಿರುವಂತೆ ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತ ಅಧಿಕ ಸಂಸದರನ್ನು ಆಯ್ಕೆ ಮಾಡಿದರೆ, ಸಂವಿಧಾನವನ್ನು ಬದಲಾಯಿಸಲಾಗುವುದು ಎಂದಿದ್ದಾರೆ. ದಿಲ್ಲಿಯ ಜಂತರ್ ಮಂತರ್‌ ನಲ್ಲಿ ಸಂವಿಧಾನ ಪ್ರತಿಯನ್ನು ಬಿಜೆಪಿಯವರೇ ಸುಟ್ಟಹಾಕಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸಂವಿಧಾನವನ್ನು ಮರುರೂಪಿಸುವ ಕೆಲಸವನ್ನು ಗುರಿಯಾಗಿಟ್ಟುಕೊಂಡಿದೆ. ಇವರು ಸಿದ್ಧಪಡಿಸುವ ಸಂವಿಧಾನದಲ್ಲಿ ಮನುಸ್ಮೃತಿಯಲ್ಲಿ ನಿರೂಪಿಸಿರುವ ತಾರತಮ್ಯ ಪದ್ಧತಿಗಳನ್ನು ಅಧಿಕೃತಗೊಳಿಸುವ ಹುನ್ನಾರ ಬಿಜೆಪಿಗಿದೆ ಎಂದು ದಲಿತ ಮುಖಂಡರು ಆತಂಕ ವ್ಯಕ್ತಪಡಿಸಿದರು.

ದಲಿತ ವಿದ್ಯಾರ್ಥಿಗಳು ಶಾಲೆಗಳಲ್ಲಿ ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿಗಳಲ್ಲಿ, ಐಐಎಂಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಾರತಮ್ಯ ಅವಮಾನ ಮತ್ತು ಹಿಂಸೆಯನ್ನು ಅನುಭವಸಬೇಕಾಗಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿ ನಾಶಕ್ಕಾಗಿ ಖಾಸಗಿಕರಣ: ಮೋದಿ ಆಳ್ವಿಕೆಯಲ್ಲಿ ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಸೇವೆಗಳು ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಖಾಸಗೀಕರಣ ಪ್ರಕ್ರಿಯೆಯು ಗಣನೀಯವಾಗಿ ಹೆಚ್ಚಾಗಿದೆ. ಈ ವಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಇತರೆ ತಳವರ್ಗದ ಯುವಕರಿಗೆ ಉದ್ಯೋಗದ ಅವಕಾಶಗಳು ಕ್ಷೀಣಿಸುತ್ತವೆ ಎಂದು ದಲಿತ ಮುಖಂಡರು ಹೇಳಿದರು.

ದಲಿತರಿಗೆ ಶಿಕ್ಷಣ ವಂಚಿಸಿದ ಮೋದಿ ಸರಕಾರ: ವಂಚಿತ ಮತ್ತು ಅಂಚಿನಲ್ಲಿನ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್‍ಗಳ ತೀವ್ರ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕೋತ್ತರ ವಿದ್ಯಾರ್ಥಿ ವೇತನ ಸರಿಸುಮಾರು ರೂ. 8000 ಕೋಟಿ ಅನುದಾನವನ್ನು ಕಾಲಕ್ಕೆ ಸರಿಯಾಗಿ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದರಿಂದಾಗಿ ಸುಮಾರು 51 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆಯುಂಟಾಗಿದೆ ದಲಿತ ಮುಖಂಡರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News